ಸೌಕೂರು ದುರ್ಗಾಪರಮೇಶ್ವರಿ ದೇವಳಕ್ಕೆ ಕನ್ನ: ಲಕ್ಷಾಂತರ ರೂ. ಆಭರಣ ದರೋಡೆ

ಕುಂದಾಪುರ: ತಾಲೂಕಿನ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು ದೇವಳದ ಕಾಣಿಕೆಹುಂಡಿಯನ್ನು ಒಡೆದು ಎರಡು ಕೆ.ಜಿ. ಚಿನ್ನದ ಸೊತ್ತುಗಳನ್ನು ಕಳವುಗೈದಿದ್ದಾರೆ. ರಾತ್ರಿ ಎಂಟೂ ವರೆಗೆ ದೇವಸ್ಥಾನದ ಅರ್ಚಕರು ಬಾಗಿಲು ಹಾಕಿ ಮನೆಗೆ ಹೋದ ನಂತರ ಈ ಪ್ರಕರಣ ನಡೆದಿದ್ದು, ಬೆಳಿಗ್ಗೆ ಎಂದಿನಂತೆ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಶೂಕ್ರವಾರ ಸಂಜೆ ದೇವಿಗೆ ಮಹಾಪೂಜೆ, ಕರ್ಕಾಟಕ ಅಮಾವಾಸ್ಯೆಯ ವಿಶೇಷ ದಿನವನ್ನು ಗಮನದಲ್ಲಿಟ್ಟುಕೊಂಡೇ ಕಳವು ನಡೆಸಿರಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ದೇವಿಗೆ ಹಾಕಲಾದ ಬೆಳ್ಳಿಯ ದೊಡ್ಡ ಮುಖವಾಡ, ಒಂದು ಚಿನ್ನದ ಮುಖ, ಅರ್ಧ ಕೆ.ಜಿ. ತೂಕದ ೧೫ ನಕ್ಷತ್ರ ಮಾಳ, ಒಂದೂವರೆ ಕೆಜಿ ತೂಕದ ಬಂಗಾರದ ಉತ್ಸವ ಮೂರ್ತಿ, ಒಂದು ಕೆ.ಜಿ. ತೂಕದ ಬೆಳ್ಳಿಯ ಉತ್ಸವ ಮೂರ್ತಿ, ವೀರಭದ್ರ ದೇವರಿಗೆ ಹಾಕಲಾಗಿದ್ದ ಬೆಳ್ಳಿಯ ಮುಖವಾಡ, ತಲೆಯ ಛತ್ರಿ, ಅಮ್ಮನವರ ದೇವಸ್ಥಾನದ ತಲೆಯ ಛತ್ರಿ, ಎರಡು ಕಾಣಿಕೆಯ ಹುಂಡಿ, ಒಂದು ಬೆಳ್ಳಿಯ ಗಂಟೆ, ಎರಡು ಕರಿಮಣಿ ಸರ, ಮೂಗುತಿ, ನೂರು ಗ್ರಾಂ ತೂಕದ ಬೆಳ್ಳಿ ತಟ್ಟೆ, ಪಂಚಲೋಹದ ನಾಲ್ಕು ಸಣ್ಣ ಮೂರ್ತಿಗಳನ್ನು ಅಪಹರಿಸಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷಗಳಿಂದ ಕಾಣಿಕೆ ಹುಂಡಿಗೆ ಭಕ್ತರು ಅರ್ಪಿಸಿದ್ದ ಚಿನ್ನದ ಒಡವೆಗಳನ್ನು ಕಾಣಿಕೆ ಹುಂಡಿಯಲ್ಲಿಯೇ ಇಡಲಾಗಿದ್ದು ಸುಮಾರು ಎರಡು ಕೆಜಿ ತೂಕದ ಬಂಗಾರವನ್ನೂ ಕದ್ದೊಯ್ದಿದ್ದಾರೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿದ ಸೌಕೂರು ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನಕ್ಕೆ ಯಾವುದೇ ಭದ್ರೆತೆಯಿಲ್ಲ. ಇದ್ದ ಒಂದೇ ಒಂದು ಸೈರನ್ ಕೂಡಾ ಕೆಟ್ಟು ವರ್ಷವಾಗುತ್ತಾ ಬಂದಿದೆ. ಅಲ್ಲದೇ ಇತ್ತೀಚೆಗೆ ಹಲವು ದೇವಸ್ಥಾನಗಳಲ್ಲಿ ಕಳವು ನಡೆದಿದ್ದರೂ ಇದುವರೆಗೂ ದೇವಸ್ಥಾನಕ್ಕೆ ಸಿಸಿ ಕ್ಯಾಮೇರಾ ಅಳವಡಿಸಿಲ್ಲ. ದೇವಸ್ಥಾನದಲ್ಲಿ ಭದ್ರತಾ ಕೊಠಡಿಯಿಲ್ಲ. ಅಲ್ಲದೇ ಕಳೆದ ಎರಡು ವರ್ಷಗಳಿಂದ ಭಕ್ತರು ನೀಡಿದ ಬಂಗಾರ, ಬೆಳ್ಳಿ ಒಡವೆಗಳನ್ನು ಕಾಣಿಕೆ ಹುಂಡಿಯಲ್ಲಿಯೇ ಭದ್ರವಾಗಿಡುವ ದೇವಸ್ಥಾನದ ನಿರ್ಧಾರ ಅನುಮಾನ ಹುಟ್ಟಿಸುವಂತಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಸುಮಾರು ಹದಿನೈದು ವರ್ಷಗಳ ಹಿಂದೆಯೂ ಈ ದೇವಸ್ಥಾನದಲ್ಲಿ ಕಳವು ನಡೆದಿತ್ತು. ಆ ಸಂದರ್ಭ ಕಳವುಗೈದವರು ದೇವಸ್ಥಾನದ ಒಳಗಿನವರೇ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು. ಇದೀಗ ಈ ದೇವಸ್ಥಾನದಲ್ಲಿ ಎರಡನೇ ಬಾರಿಗೆ ಭಾರೀ ಕಳ್ಳತನ ನಡೆದಿದೆ. ಕಳೆದ ವಾರದವರೆಗೆ ದೇವಸ್ಥಾನಕ್ಕೆ ಆಡಳಿತ ಮೊಕ್ತೇಸರರಿದ್ದು ಇದೀಗ ದೇವಸ್ಥಾನದ ಜವಾಬ್ಧಾರಿಯನ್ನು ತಹಸೀಲ್ದಾರ್ ವಶಕ್ಕೆ ಒಪ್ಪಿಲಾಗಿತ್ತು.

ಘಟನಾ ಸ್ಥಳಕ್ಕೆ ಬೆಳಿಗ್ಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರೀಕ್ಷೆ ನಡೆಸಿದ್ದಾರಾದರೂ ರಾತ್ರಿಯಿಡೀ ಮಳೆಯಿದ್ದುದರಿಂದ ಯಾವ ಮಹತ್ವದ ಸುಳಿವು ದೊರೆತಿಲ್ಲವಾದರೂ ಈ ಹಿಂದೆ ಬೇರೆ ದೇವಸ್ಥಾನಗಳಲ್ಲಿ ಕಳವು ನಡೆಸಿದವರ ಕೃತ್ಯವೇ ಇರಬಹುದೆಂಬುದಾಗಿ ಶಂಕಿಸಲಾಗಿದೆ. ಕುಂದಾಪುರದ ಡಿವೈಎಸ್ಪಿ ಎಂ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಪಿ.ಎಂ ದಿವಾಕರ, ಉಪನಿರೀಕ್ಷಕ ನಾಸೀರ್ ಹುಸೇನ್ ನೇತೃತ್ವದಲ್ಲಿ ಕಳವು ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com