ಹೆಮ್ಮಾಡಿ: 3 ಅಂಗಡಿಗಳಿಗೆ ನುಗ್ಗಿ ದರೋಡೆ

ಹೆಮ್ಮಾಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿಯ ವಿಘ್ನೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ 3 ಅಂಗಡಿಗಳಿಗೆ ನುಗ್ಗಿದ ಕಳ್ಳರು 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಕದ್ದು ಪರಾರಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಹೊಸಾಡು ಅಮರನಾಥ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಸಹೋದರರ ಒಡೆತನದ ಅಂಬಾ ಹೋಮ್‌ ಅಪ್ಲಾಯನ್ಸಸ್‌ ಅಂಗಡಿಯ ಎಲ್‌ಇಡಿ ಟಿವಿ, ಗ್ರೈಂಡರ್‌, ಮಿಕ್ಸಿ, ಕೂಲರ್‌ ಸೇರಿದಂತೆ ಒಟ್ಟು ಎರಡೂವರೆ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದರೇ, ಪ್ರಕಾಶ್‌ ನಾಯಕ್‌ ಮತ್ತು ರವಿ ಆಚಾರ್ಯ ಪಾಲುದಾರಿಕೆಯ ಸನ್‌ಶೈನ್‌ ಎಲೆಕ್ಟ್ರಿಕಲ್ಸ್‌ನ ವಯರಿಂಗ್‌ ಮೆಟೀರಿಯಲ್ಸ್‌ ತುಂಬಿದ್ದ ಚೀಲಗಳನ್ನೇ ಕಳ್ಳರು ಹೊತ್ತೂಯ್ದಿದ್ದಾರೆ. 15 ಸಾವಿರ ಕ್ಯಾಶ್ ಸೇರಿದಂತೆ ಅಂದಾಜು ಮೂರು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಸೊತ್ತುಗಳನ್ನು ಕಳವು ಮಾಡಲಾಗಿದೆ. ಅಶೋಕ್‌ ಅವರ ಮಾಲಿತ್ವದ ವಿನಯ ಸ್ಟುಡಿಯೋದ ಕ್ಯಾಶ್‌ಬಾಕ್ಸ್‌ನಿಂದ 600 ರೂ. ಚಿಲ್ಲರೆ ಹಣ ಕಳವು ಮಾಡಲಾಗಿದೆ. ಸ್ಟುಡಿಯೋದಲ್ಲಿದ್ದ 1.75 ಲಕ್ಷ ರೂ. ಮೌಲ್ಯದ ವಿಡಿಯೋ ಕೆಮರಾವನ್ನು ಕದ್ದೊಯ್ಯಲು ಯತ್ನಿಸಿದ್ದರೂ ಕೊನೆಗೆ ಅಲ್ಲಿಯೇ ಸೋಫಾದ ಮೇಲೆ ಬಿಟ್ಟುಹೋಗಿದ್ದಾರೆ. ಮಧ್ಯರಾತ್ರಿ ವೇಳೆಗೆ ಹೈಡ್ರಾಲಿಕ್‌ ಮಷೀನ್‌ ಉಪಯೋಗಿಸಿ ಶಟರ್‌ಗಳನ್ನು ತೆರೆದಿರುವುದು ಕಂಡುಬರುತ್ತಿದೆ. ಎಲ್ಲಾ ಅಂಗಡಿಗಳ ಮಾಲಕರು ಪೊಲೀಸರಿಗೆ ದೂರು, ಮಾಹಿತಿ ನೀಡಿದ್ದಾರೆ. 

ಕಳ್ಳರ ಚಲನವಲನಗಳು ವಿಘ್ನೇಶ್ವರ ಕಾಂಪ್ಲೆಕ್ಸ್‌ನ ನೆಲಮಹಡಿಯ ಹೋಟೆಲಿನಲ್ಲಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕದ್ದ ಮಾಲುಗಳನ್ನು ಈಚರ್‌ ಲಾರಿಯಲ್ಲಿ ತುಂಬಿಸಿಕೊಂಡು ಹೊರಡುವ ಹೊತ್ತಿಗೆ ಸಿಸಿ ಕೆಮರಾವನ್ನು ನೆಲಮುಖವಾಗಿ ಬಗ್ಗಿಸಿದ್ದಾರೆ. ಆದರೆ ಆ ಮುಂಚಿನ ಅವರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ರಾತ್ರಿ 1.58ಕ್ಕೆ ಕಳ್ಳರು ಕದ್ದ ಮಾಲುಗಳನ್ನು ತುಂಬಿದ ಈಚರ್‌ ಲಾರಿ ಬೈಂದೂರು-ಭಟ್ಕಳದತ್ತ ತೆರಳಿರುವುದು ಪ್ರಕರಣಕ್ಕೆ ಸಾಕ್ಷವನ್ನೊದಗಿಸಿದೆ.

ಉಡುಪಿ ಕ್ರೈಂ ಬ್ರಾಂಚ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿ ತಪಾಸಣೆ ನಡೆಸಿದೆ. ಕ್ರೈಂ ಬ್ರಾಂಚ್‌ ಎಸ್‌ಐ ಜಯಶಂಕರ್‌, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರದ ಎಸ್ಐ ನಾಸಿರ್‌ ಹುಸೇನ್‌ ಕಳ್ಳರ ಪತ್ತೆಗೆ ಬಲೆಬೀಸಿದ್ದಾರೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com