ಕುಂದಾಪುರ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವಿವಾಹಿತ ಮಹಿಳೆಯನ್ನು ಕೋಟೇಶ್ವರದ ವಾಹನ ವಾಹನ ಮಾಲಕರು ರಕ್ಷಿಸಿ ಪೊಲೀಸ್ ಸಮಕ್ಷಮದಲ್ಲಿ ಆಕೆಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ ಘಟನೆ ಕೋಟೇಶ್ವರದಲ್ಲಿ ನಡೆದಿದೆ.
ಬೆಳಿಗ್ಗೆ ಕೋಟೇಶ್ವರದ ಬಸ್ ನಿಲ್ದಾಣದಲ್ಲಿ ತನ್ನ ಪುಟ್ಟ ಬಾಲೆಯೊಡನೆ ತಿರುಗಾಡುತ್ತಿದ್ದ ವಿವಾಹಿತ ಮಹಿಳೆ ಅಲ್ಲೇ ಸನಿಹದ ಕೊಠಡಿಯ ಬಳಿ ಕುಳಿತು ಮಾಂಗಲ್ಯ ಸೂತ್ರ ಕಳಚಿ ಕೈಯಲ್ಲೇ ಹಿಡಿದು ಮೆಡಿಕಲ್ ಶಾಪ್ನಲ್ಲಿ ನಿದ್ರೆ ಮಾತ್ರೆ ಅಥವಾ ವಿಷ ನೀಡುವಂತೆ ಒತ್ತಾಯಿಸುತ್ತಿದ್ದಳು. ಆಕೆಯ ಚಲನವಲನ ವೀಕ್ಷಿಸಿದ ಕಾರು ಚಾಲಕ ಗೋವಿಂದ ಮಾನಸಿಕ ಸಮಸ್ಯೆಗೆ ಆಕೆ ಒಳಗಾಗಿರಬಹುದೆಂದು ಗ್ರಹಿಸಿ ಆಕೆಯನ್ನು ಸೂಕ್ತ ವೈದ್ಯರಲ್ಲಿಗೆ ಕರೆದೊಯ್ಯುವುದು ಉಚಿತವೆಂದು ಭಾವಿಸಿ ಇನ್ನಿತರರನ್ನು ಕರೆಯುವುದರೊಳಗೆ ದಿಢೀರಾಗಿ ಆಕೆ ನಾಪತ್ತೆಯಾದಳು. ಆಕೆಯನ್ನು ಹುಡುಕಾಡಿದಾಗ ಇಲ್ಲಿನ ದೇಗುಲದ ಬೃಹತ್ ಕೆರೆಯತ್ತ ಸಾಗುತ್ತಿರುವುದನ್ನು ಗಮನಿಸಿ ಇತರ ವಾಹನ ಚಾಲಕರೊಡನೆ ಸೇರಿ ಆಕೆಯ ಮನವೊಲಿಸಿ ಪೇಟೆಗೆ ಕರೆದುಕೊಂಡು ಬಂದರು. ಅಲ್ಲಿನ ಸಮಾಜಸೇವಕರು ಹಾಗೂ ಸ್ಥಳೀಯ ಗಣ್ಯರೊಡನೆ ಸೇರಿ ಆಕೆಯ ಪೂರ್ವಾಪರ ವಿಚಾರಿಸಿದಾಗ ತಾನು ಮಣೂರು ಪಡುಕೆರೆಯ ನಿವಾಸಿಯಾಗಿದ್ದು ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮಗುವಿನೊಡನೆ ಕೆರೆಯತ್ತ ಸಾಗಿರುವುದಾಗಿ ಹೇಳಿದರು. ಆ ಕೂಡಲೇ ಮೊಗವೀರ ಸಂಘಟನೆಯ ಯುವಕರು ಆಕೆಯ ಸಂಬಂಧಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿ ಕೋಟೇಶ್ವರಕ್ಕೆ ಬರುವಂತೆ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಬಂಧುಗಳು ಪೊಲೀಸರ ಹಾಗೂ ಕೋಟೇಶ್ವರದ ವಾಹನ ಚಾಲಕರ ಸಹಕಾರದೊಡನೆ ಆಕೆಯನ್ನು ಮನೆಗೆ ಕೊಂಡೊಯ್ದರು.
ನಾರಾಯಣ ಪೈಂಟರ್ ಕೋಟೇಶ್ವರ, ಅಶೋಕ್ ಪೂಜಾರಿ ಬೀಜಾಡಿ, ಗೋವಿಂದ ಹಳೆಅಳಿವೆ, ಮಾಜಿ ಗ್ರಾ. ಪಂ. ಸದಸ್ಯೆ ಪ್ರಭಾವತಿ ಇನ್ನಿತರರು ಸೇರಿ ಕೋಟ ಪೊಲೀಸ್ ಠಾಣೆಯಲ್ಲಿ ಕುಟುಂಬದವರ ಸಮಕ್ಷಮದಲ್ಲಿ ರಾಜಿ ಸೂತ್ರದೊಡನೆ ಪ್ರಕರಣಕ್ಕೆ ಸುಖಾಂತ್ಯ ಕಂಡುಕೊಂಡರು.