ಸರಣಿ ಕಳವುಗೈದ ತಂಡ ಕುಂದಾಪುರ ಪೊಲೀಸರ ಬಲೆಗೆ

ಕುಂದಾಪುರ: ಕೆಲವೇ ದಿನಗಳ ಹಿಂದೆ ಕೋಟೇಶ್ವರದ ಮೊಬೈಲ್ ಶಾಪ್ ಸೇರಿದಂತೆ ಹೆಮ್ಮಾಡಿಯ ವಿಘ್ನೇಶ್ವರ ಕಾಂಪ್ಲೆಕ್ಸ್ ಸಹಿತ ಹಲವೆಡೆ ಸರಣಿ ಕಳ್ಳತನ ಗೈದು ನಗದು ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ ಕಳ್ಳರನ್ನು ಕೊನೆಗೂ ಕುಂದಾಪುರ ಪೋಲಿಸರು ಹೆಡೆಮುರಿ ಕಟ್ಟಿ ತರುವಲ್ಲಿ ಯಶಸ್ವಿಯಾಗಿದ್ದಾರೆ.ನಾಲ್ವರು ಕಳ್ಳರನ್ನು ಬಂಧಿಸಿರುವ ಪೊಲೀಸರು ಬೃಹತ್ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಂಕರನಾರಾಯಣ ಪೊಲೀಸರು ಪಿ.ಎಸ್.ಐ ದೇಜಪ್ಪ ಅವರ ನೇತೃತ್ವದಲ್ಲಿ ಜುಲೈ 26 ರಂದು ಖಚಿತ ಮಾಹಿತಿ ಮೇರೆಗೆ ಸಿದ್ದಾಪುರ ಪ್ರದೇಶದಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಈ ಗ್ಯಾಂಗ್ನ ಇಬ್ಬರು ಪ್ರಮುಖ ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ರಾಜಸ್ಥಾನದ ಗಿರಿಧರಲಾಲ್(21) ಮತ್ತು ಮಾಣಿಕ್ ಚಂದ್ (38) ಸಿಕ್ಕಿಬಿದ್ದ ಕಳ್ಳರು. ವಿಚಾರಣೆಯ ಬಳಿಕ ಇವರಿಬ್ಬರು ನೀಡಿದ ಮಾಹಿತಿಯ ಮೇರೆಗೆ ಬೆಂಗಳೂರಿಗೆ ತೆರಳಿದ ಕುಂದಾಪುರ  ವೃತ್ತ ನಿರೀಕ್ಷಕ ದಿವಾಕರ್.ಪಿ.ಎಮ್ ಇನ್ನಿಬ್ಬರು ಆರೋಪಿಗಳನ್ನು ಬೆಂಗಳೂರಿನಗಾಯತ್ರಿ ನಗರದಲ್ಲಿ ದಸ್ತಗಿರಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಿಕ್ಕ ಇಬ್ಬರೂ ಆರೋಪಿಗಳು ಕೂಡ ರಾಜಸ್ತಾನದವರೇ ಆಗಿದ್ದು ಇಡೀ ಕಳ್ಳರ ತಂಡ ರಾಜಸ್ತಾನದ ಪಾಲಿ ಜಿಲ್ಲೆಗೆ ಸೇರಿದ ಕಳ್ಳರದ್ದಾಗಿದೆ. ಬೆಂಗಳೂರಿನಲ್ಲಿ ಬಂಧಿತರು ಪ್ರಕಾಶ್(24) ಸುನೀಲ್ ಸೇನ್(18).
 ಮೂಲತ: ರಾಜಸ್ತಾನದವರಾದ ಆರೋಪಿಗಳು ಹಲವು ಸಮಯದಿಂದ  ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು.  ಬೊಲೆರೊ ವಾಹನವೊಂದನ್ನು ಕದ್ದು ಅದಕ್ಕೆ ರಾಜಸ್ತಾನ ನೊಂದಣಿಯ ನಕಲಿ ನಂಬರ್ ಪ್ಲೇಟನ್ನು ತಗಲಿಸಿ ಕರಾವಳಿಯತ್ತ ತಮ್ಮ ದರೋಡೆ ಅಭಿಯಾನಕ್ಕೆ ಹೊರಟಿದ್ದರು. ಹಗಲಿನಲ್ಲಿ ಬೊಲೆರೋ ವಾಹನವನ್ನು ಎಸ್ಕಾರ್ಟ್ ಆಗಿ ಬಳಸುತ್ತಾ ಕಳ್ಳತನಕ್ಕೆ ತಕ್ಕುದಾದ ಸ್ಥಳವನ್ನು ಗುರ್ತಿಸಿ, ತಡ ರಾತ್ರಿ ವೇಳೆಗೆ ಲಗ್ಗೆಯಿಕ್ಕಿ ಯಶಸ್ವಿಯಾಗುತ್ತಿದ್ದರು. ಅಚ್ಚರಿಯ ವಿಷಯವೆಂದರೆ  ಕದ್ದ ಸರಕುಗಳನ್ನು ಸಾಗಿಸುವುದಕ್ಕೆ ಈಚರ್ ವಾಹನವೊಂದನ್ನು ಕಳ್ಳರು ಹೊಂದಿದ್ದು,  ಹೆಮ್ಮಾಡಿಯ ಅಂಬಾ ಎಲೆಕ್ಟ್ರೋನಿಕ್ಸ್ ದರೋಡೆಯ ಸಂದರ್ಭ ಕದ್ದ ಸರಕುಗಳನ್ನು ಸಾಗಿಸುವುದಕ್ಕೆ ಇದೇ ಈಚರ್ ವಾಹನವನ್ನು ಕಳ್ಳರು ಬಳಸಿದ್ದರು. ತಮ್ಮ ಎಂದಿನ ಶೈಲಿಯಂತೆ ದರೋಡೆ ಸಮಯದಲ್ಲಿ ಕಾಂಪ್ಲೆಕ್ಸ್ ಎದುರಿಗಿದ್ದ ಸಿಸಿ ಕ್ಯಾಮೆರಾವನ್ನು ಪುಡಿಗಟ್ಟಿದ ಡಕಾಯಿತರಿಗೆ ಅಂಬಾ ಎಲೆಕ್ಟ್ರೋನಿಕ್ಸ್ ಮಳಿಗೆಯ ಒಳಗೆ ಅವಿತಿದ್ದ ಸಿಸಿ ಕ್ಯಾಮೆರಾ ದೃಷ್ಟಿಗೆ ಬೀಳದಿದ್ದದ್ದು ಪೋಲಿಸ್ ಶಿಕಾರಿಗೆ ಸಹಕಾರಿಯಾಗಿತ್ತು. 

ಆ ಸಿಸಿ ಕ್ಯಾಮೆರಾವನ್ನು ಪರೀಶೀಲಿಸಿದ ಪೋಲಿಸರು ಅದರಲ್ಲಿ  ಅಸ್ಪಷ್ಟವಾಗಿ ಮೂಡಿದ ಈಚರ್ ವಾಹನದ ಹೆಸರು, ನಂಬ್ರ ಸಹಿತ ಅದರ ರೂಪು ರೇಷೆಗಳನ್ನು ಬೆಂಬತ್ತಿದ್ದರು. ಹುಬ್ಬಳ್ಳಿಯ ಬಂಕಾಪುರದ ಚೆಕ್ ಪೋಸ್ಟ್ ಸಮೀಪದಿಂದ  ಇಂತಹ ವಾಹನ ಒಂದು ಸರಿದು ಹೋದ ಸ್ಪಷ್ಟ ಸುಳಿವು ಪಡೆದ ಕುಂದಾಪುರದ ವಿಶೇಷ ಪೋಲಿಸ ತನಿಖಾ ತಂಡಕ್ಕೆ  ದರೋಡೆಯನ್ನು ಬೇಧಿಸುವುದರಲ್ಲಿ ಅತ್ಯಂತ ಮಹತ್ವದ ಎಳೆಯೊಂದು  ದೊರಕಿ ಅದು ಅವರನ್ನು ಸೀದಾ ಬೆಂಗಳೂರಿನಲ್ಲಿರುವ ಈಚರ್ ವಾಹನದ ಮಾಲೀಕನ ಮನೆ ಅಂಗಳಕ್ಕೆ ತಂದು ನಿಲ್ಲಿಸಿತ್ತು. ಅಲ್ಲಿ ವಿಚಾರಿಸಿದಾಗ ರಾಜಸ್ತಾನದ ಮೂಲದ ಮಾಣಿಕ್ ಚಂದ್ ಎಂಬಾತ ಅದನ್ನು ಕೆಲ ಸಮಯದ ಹಿಂದೆ  ಲೀಸಿಗೆ ಪಡೆದು ಕೊಂಡಿರುವ ವಿಷಯ ಬಯಲಾಗಿತ್ತು. ಸರಿ, ಆತನಿಗಾಗಿ ಬೋನನ್ನು ಸಿದ್ಧ ಪಡಿಸಿದ್ದ ಪೋಲಿಸರು ಕೆಲವು ದಿನಗಳ ಕಾಲಅತ್ಯಂತ ಸಹನೆಯಿಂದ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಯಶಸ್ವಿಯಾಗಿ ಪ್ರಥಮ ಬೇಟೆಯನ್ನು ತಮ್ಮ ಬೋನಿಗೆ ಬೀಳಿಸಿದ್ದರು. ಅವನ ಮೂಲಕ ಇತರ ಸಹಚರ ಕಳ್ಳರನ್ನು ಬೇಟೆಯಾಡಿದ ಪೋಲಿಸರು ಅವರು ಕದ್ದ ಬಹತೇಕ ಮಾಲಿನ ಸಮೇತ ಕುಂದಾಪುರಕ್ಕೆ ಕರೆ ತಂದಿದ್ದು ಅವರಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ತನಿಖೆಯ ರಾಜಸ್ತಾನದ ನಟೋರಿಯಸ್ ಡಕಾಯಿತರಾಗಿದ್ದು ಪಿಸ್ತೂಲನ್ನು ಸಹಾ ಹೊಂದಿದ್ದಾರೆ.

ಈ ಹಿಂದೆಯೂ ಸಹಾ ಆಭರಣಂಗಡಿಗಳು, ಮದ್ಯದ ಅಂಗಡಿಗಳು, ದೇವಸ್ಥಾನಗಳೂ ಸೇರಿದಂತೆ ಕುಂದಾಪುರದ ಹಲವೆಡೆ ಸರಣಿಗಳ್ಳತನಗಳು ಜರಗಿ, ಮುಂಜಾನೆ ಮಾತ್ರ ಸುದ್ದಿತಿಳಿದು ಪೋಲಿಸರ ಆಗಮನವಾಗುತ್ತಿತ್ತು. ಜೊತೆಗೆ ಪೋಲಿಸ್ ನಾಯಿಯೂ ಘಟನೆ ಜರಗಿದ ಪರಿಸರದಲ್ಲಿ ಸುತ್ತುಹೊಡೆದು ತಣ್ಣಗೆ ತಾನು ಬಂದ ವಾಹನದಲ್ಲಿ ಪವಡಿಸಿ ಬಿಡುತ್ತಿತ್ತು.ಸಾರ್ವಜನಿಕ ನೆನಪಿನ ಶಕ್ತಿಯ ಪ್ರಮಾಣ ಅರಿತಿದ್ದ ಪೋಲಿಸರು ತನಿಕೆ ಪ್ರಗತಿಯಲ್ಲಿದೆ ಎಂದು ಪ್ರತಿ ಪ್ರಕರಣದಲ್ಲೂ ಷರಾ ಬರೆದು ಫೈಲನ್ನು ಬದಿಗೆ ಸರಿಸಿ ಬಿಡುತ್ತಿದ್ದರು. ಆದರೆ ಈ ಬಾರಿ ಹಾಗಾಗಲಿಲ್ಲಾ. ಹಗಲುರಾತ್ರಿ ಶ್ರಮಿಸಿದ ತನಿಖಾ ತಂಡ ಕೊನೆಗೂ ಕಳ್ಳರ ತಂಡದ ಯಶಸ್ವಿ ಶಿಕಾರಿಯನ್ನು ಬೇಟೆಯಾಡಿ ಮುಗಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com