ಕುಂದಾಪುರ: ದನಗಳನ್ನು ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಾಟ ನಡೆಸಲಾಗುತ್ತಿದ್ದಾರೆಂಬ ಸಂಶಯದ ಮೇಲೆ ಮಂಗಳೂರಿನ ಇಬ್ಬರು ವ್ಯಕ್ತಿಗಳಿಗೆ ನಾಲ್ಕೈದು ಜನರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹುಣ್ಸೆಮಕ್ಕಿಯಲ್ಲಿ ನಡೆದಿದೆ.
ಮಂಗಳೂರಿನ ನಿವಾಸಿಗಳಾದ ಇಕ್ಬಾಲ್ ಹಾಗೂ ಹುಸೇನ್ ಅವರು ಹುಣ್ಸೆಮಕ್ಕಿಯ ಹಾಡಿಯಲ್ಲಿ ದನಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡುವ ಸಲುವಾಗಿ ಕಟ್ಟಿಹಾಕಿದ್ದರು ಎಂದು ಆರೋಪಿಸಿ ಗುಂಪೊಂದು ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ಘಟನೆಯಲ್ಲಿ ಇಕ್ಬಾಲ್ ಹಾಗೂ ಹುಸೇನ್ ತೀವ್ರವಾಗಿ ಗಾಯಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸುವಾಗ ಹಲ್ಲೆ ನಡೆಸಿದ ತಂಡ ಅಲ್ಲಿಂದ ಪರಾರಿಯಾಗಿತ್ತು. ಅನಂತರ ಹಲ್ಲೆಗೊಳಗಾದವರನ್ನು ಕೋಟ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ವಶಪಡಿಸಿಕೊಂಡ ಗೋವುಗಳನ್ನು ಸಮೀಪದ ಗೋಶಾಲೆಗೆ ಒಪ್ಪಿಸಲಾಗಿದೆ. ಕೋಟ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.
ಹಲ್ಲೆಗೊಳಗಾದವರಿಂದ ದೂರು:
ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಾಲ್ವರ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಪಂಜಿನ ಮೊಗರು, ನಿವಾಸಿಗಳಾದ ಇಕ್ಬಾಲ್ ಮತ್ತು ಹುಸೇನ್ ಅವರು ಜಪ್ತಿ ಗ್ರಾಮದ ನಾರಾಯಣ ಅವರಿಂದ 4 ಜಾನುವಾರುಗಳನ್ನು ಖರೀದಿಸಿ ಮಂಗಳೂರಿಗೆ ಸಾಗಿಸುವ ಸಲುವಾಗಿ ಕ್ಯಾಸನಮಕ್ಕಿ ಬಾಲಕೃಷ್ಣ ಶೆಟ್ಟಿ ಅವರ ಮನೆ ವಠಾರದಲ್ಲಿ ತಂದು ಕಟ್ಟುತ್ತಿದ್ದಾಗ ಸ್ಥಳೀಯರಾದ ಅಣ್ಣಪ್ಪ ಆಚಾರಿ, ರಾಮ ಕುಲಾಲ್, ರಮೇಶ, ಮಂಜುನಾಥ ಹಾಗೂ ಇತರರು ಸ್ಥಳಕ್ಕೆ ಧಾವಿಸಿ ಅವಾಚ್ಯ ಶಬ್ದಗಳಿಂದ ಬೈದು ಇಕ್ಬಾಲ್ ಮತ್ತು ಹುಸೇನ್ ರವರಿಗೆ ದೊಣ್ಣೆಯಿಂದ ಕೈಕಾಲುಗಳಿಗೆ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಓಡಿ ಹೋಗಿದ್ದಾರೆ ಎಂದು ದೂರು ದಾಖಲಾಗಿದೆ