ಕುಂದಾಪುರ: ಹೆಮ್ಮಾಡಿ-ಕೊಲ್ಲೂರು ರಾಜ್ಯ ಹೆದ್ದಾರಿ ನಡುವಿನ ಕೆಂಚನೂರು ಗ್ರಾಮದ ಜಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಿಡಿಲು ಬಡಿದು ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದೇ ವೇಳೆ ಸಿಡಿಲಾಘಾತಕ್ಕೆ ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ಅಂಗಡಿ ಹಾಗೂ ಎರಡು ಮನೆಗಳ ವಿದ್ಯುತ್ ಸಂಪರ್ಕಕ್ಕೆ ಅಪಾರ ಹಾನಿಯಾಗಿದೆ.
ಜಾಡಿಯಲ್ಲಿ ದಿನಸಿ ಅಂಗಡಿ ಹೊಂದಿರುವ ಪ್ರಭಾಕರ ಶೆಟ್ಟಿ ಅವರ ಪುತ್ರ ನಿತೇಶ್ (16) ಸಿಡಿಲಾಘಾತಕ್ಕೀಡಾದ ಬಾಲಕ. ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಭಾಕರ ಶೆಟ್ಟಿ ಅವರು ಸಂಬಂಧಿಕರ ವಿವಾಹ ಸಮಾರಂಭ ಮುಗಿಸಿಕೊಂಡು ಮಗನೊಂದಿಗೆ ಆಗಷ್ಟೇ ಅಂಗಡಿಗೆ ಬಂದಿದ್ದರು. ಸಿಡಿಲಬ್ಬರಕ್ಕೆ ಅಂಗಡಿಯ ವಿದ್ಯುತ್ ಸಂಪರ್ಕ ಹಾನಿಗೀಡಾಗಿದೆ.
ಜಾಡಿ ನಿವಾಸಿ ಗುಲಾಬಿ ಮತ್ತು ನಾರಾಯಣ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಅವರ ಮನೆಯ ವಿದ್ಯುತ್ ವ್ಯವಸ್ಥೆಯೂ ಹಾನಿಗೀಡಾಗಿದೆ. ರಾಘವ ದೇವಾಡಿಗ ಅವರ ದಿನಸಿ ಅಂಗಡಿಯ ಮೀಟರ್ ಬೋರ್ಡ್ ಮತ್ತು ವಯರ್ಗಳು ಸುಟ್ಟುಹೋಗಿವೆ.