ಕುಂದಾಪುರ: ಇಲ್ಲಿನ ಎ.ಪಿ.ಎಂ.ಸಿ ಆವರಣದಲ್ಲಿರುವ ಅಂಗಡಿಯೊಂದಕ್ಕೆ ಇಂದು ಮುಂಜಾನೆಯ ವೇಳೆಗೆ ಬೆಂಕಿ ಬಿದ್ದಿದ್ದು ಅಂಗಡಿಯ ಮುಂಭಾಗ ಸಂಪೂರ್ಣ ಸುಟ್ಟಹೋಗಿದ್ದು ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟುಹೋಗಿದೆ.
ನಗರದ ಕೃಷಿ ಮಾರುಕಟ್ಟೆಯ ಆವರಣದಲ್ಲಿ 'ವೆಂಕಟೇಶ ಕೃಪಾ' ಎಂಬ ದಿನಸಿ ಅಂಗಡಿಗೆ ಮುಂಜಾನೆ 4:30ರ ಸುಮಾರಿಗೆ ಬೆಂಕಿ ಬಿದ್ದಿದೆ. ಬೆಂಕಿಯ ಪ್ರಖರತೆಗೆ ಅಂಗಡಿಯ ಎದುರು ಭಾಗದಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು ಸ್ವಲ್ಪ ಹೊತ್ತಿನ ಬಳಿಕ ಇದನ್ನು ಗಮನಿಸಿದ ಎ.ಪಿಎಂ.ಸಿ ವಾಚ್ಮನ್ ಅಂಗಡಿ ಮಾಲಿಕರಿಗೆ ವಿಷಯ ತಿಳಿಸಿದ್ದಾರೆ. ಬೆಳಿಗ್ಗೆ ವೇಳೆ ಮಳೆಯಿದ್ದುದರಿಂದ ಬೆಂಕಿ ಮತ್ತಷ್ಟು ಹರಡಲಿಲ್ಲ. ಸ್ಥಳೀಯರು ಸಹಕಾರದಿಂದ ಬೆಂಕಿಯನ್ನು ನಂದಿಸಲಾಯಿತು.
ಅಂಗಡಿಯು ಗಂಗೊಳ್ಳಿಯ ವೆಂಕಟೇಶ ಪೈ ಅವರಿಗೆ ಸೇರಿದ್ದು, ಕಳೆದ 5 ವರ್ಷಗಳಿಂದ ಇಲ್ಲಿ ವ್ಯವಹಾರ ನಡೆಸುತ್ತಿದ್ದರು. ವಾರದಲ್ಲಿ ಶುಕ್ರವಾರ ಹಾಗೂ ಶನಿವಾರ ಮಾತ್ರ ಅಂಗಡಿ ತೆರೆಯಲಾಗುತ್ತಿತ್ತು.
ಕಳೆದ ಬಾರಿ ಗಂಗೊಳ್ಳಿಯ ಗಲಭೆಗೆ ಸಂದರ್ಭದಲ್ಲಿ ಇವರದೇ ಒಡೆತನದ ಗಂಗೊಳ್ಳಿಯ ಅಂಗಡಿಗೆ ಬೆಂಕಿ ಹಚ್ಚಲಾಗಿತ್ತು. ಮತ್ತೆ ಅವರದೇ ಅಂಗಡಿಗೆ ಬೆಂಕಿ ಬಿದ್ದಿರುವುದರಿಂದ ಇದು ಕಿಡಿಗೇಡಿಗಳ ಕೃತ್ಯವಿರಬಹುದುದೆಂದು ಶಂಕಿಸಲಾಗಿದೆ.