ಬೈಂದೂರು: ಮಂಗಳವಾರ ರಾತ್ರಿ ಸುರಿದ ಅಕಾಲಿಕ ಗಾಳಿ, ಗುಡುಗು ಸಹಿತ ಮಳೆಗೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಹಾಗೂ ಬೈಂದೂರಿನ ಸುತ್ತಮುತ್ತ ಅಪಾರ ಹಾನಿ ಸಂಭವಿಸಿದೆ.
ಬೈಂದೂರಿನ ಗಂಗನಾಡು, ಮದ್ದೋಡಿ ಮುಂತಾದ ಕಡೆ ಭಾರೀ ಗಾಳಿ ಮಳೆಗೆ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಬೆಳೆ ಹಾನಿ ಹಾಗೂ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.
ಕಾಲ್ತೋಡು ಗ್ರಾಮದ ಪಾರ್ವತಿ ಶೆಡ್ತಿ ಅವರ ಮನೆ ಮತ್ತು ಶಿರೂರು ಬಪ್ಪನಬೈಲು ತಿಮ್ಮಪ್ಪ ಪೂಜಾರಿ ಅವರ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಯಳಜಿತ ಗ್ರಾಮದ ನಾಗು ಕೊಠಾರಿ, ಗೋವಿಂದ ಕೊಠಾರಿ ಮತ್ತು ಗೋಳಿಹೊಳೆ ಮುತ್ತಯ್ಯ ಮಡಿವಾಳ ಅವರ ಮನೆಯ ಶೀಟ್ಗಳು ಹಾರಿ ಹೋಗಿವೆ. ಸುಶೀಲಾ ಕೊರಗಯ್ಯ ಶೆಟ್ಟಿ ಹಾಗೂ ಲಲಿತಾ ಲಕ್ಷ್ಮಣ ಶೆಟ್ಟಿ ಅವರ ಮನೆಯ ಮೇಲ್ಛಾವಣಿಗೆ ಭಾಗಶಃ ಹಾನಿಯಾಗಿದೆ. ಕಾಲ್ತೋಡು ಭಾಸ್ಕರ ಶೆಟ್ಟಿ ಅವರ ಬಾಳೆ ಮತ್ತು ಅಡಿಕೆ ಮರಗಳು ಉರುಳಿ ಬಿದ್ದಿವೆ.
ಗಂಗನಾಡು ಸಜಿ ಮೋನು ಅವರ ಮನೆಯ ಮಾಡು ಹಾರಿ ಹೋಗಿದ್ದು, 25,000 ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಮೂಕಾಂಬು ಶೆಡ್ತಿ ಅವರ ಕೊಟ್ಟಿಗೆಯ ಮಾಡು ಸಂಪೂರ್ಣ ಕುಸಿದಿದ್ದು, ಒಂದು ಕರು ಮೃತಪಟ್ಟಿದೆ.
ಯಡ್ತರೆ ಗ್ರಾಮದ ಕೆ.ಪಿ. ಅಬ್ರಹಾಂ ಅವರ ನಾಲ್ಕೂವರೆ ಸಾವಿರ ಬಾಳೆ ಗಿಡಗಳು, ಜೋಶಿ ಅವರಿಗೆ ಸೇರಿದ ಒಂದೂವರೆ ಸಾವಿರ ಬಾಳೆ ಗಿಡಗಳು, ಊದೂರು ಸಮೀಪದ ಕರ್ನಿಗದ್ದೆ ವಿಶಾಲ ಪೂಜಾರಿ ಅವರ 500ಕ್ಕೂ ಅಧಿಕ ಬಾಳೆ ಗಿಡಗಳು ನೆಲಕ್ಕುರುಳಿವೆ.
ಪಶ್ಚಿಮ ಘಟ್ಟ ತಪ್ಪಲು ಪ್ರದೇಶಗಳಾದ ಸಿದ್ದಾಪುರ, ಅಮಾಸೆಬೈಲು. ಕಲಮಶಿಲೆ, ಹಳ್ಳಿಹೊಳೆ, ಬೆಳ್ವೆ, ಗೋಳಿಯಂಗಡಿ ಮೊದಲಾದೆಡೆ ಮಂಗಳವಾರ ತಡರಾತ್ರಿ ಗುಡುಗು ಸಹಿತ ಮಳೆ ಬಂದಿದೆ. ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ.
ಅಂದಾಜು 16ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಬೈಂದೂರಿನ ನಷ್ಟ ಸಂಭವಿಸಿದ ಸ್ಥಳಕ್ಕೆ ವಿಶೇಷ ತಹಶೀಲ್ದಾರ ಕಿರಣ್ ಜಿ. ಗೌರಯ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಮಂಜುನಾಥ ಬಿಲ್ಲವ, ಸತೀಶ ಹೋಬಳಿದಾರ್ ಮೊದಲಾದವರು ಭೇಟಿ ನೀಡಿದ್ದಾರೆ.