ಬೈಂದೂರು ಸಿ.ಆರ್.ಪಿ ನಿತ್ಯಾನಂದ ಲೋಕಾಯುಕ್ತರ ಬಲೆಗೆ

ಬೈಂದೂರು: ಖಾಸಗಿ ಶಾಲೆಯೊಂದಕ್ಕೆ ಆರ್.ಟಿ.ಇ ಕಾಯ್ದೆಯಡಿಯಲ್ಲಿ ಮಗುವನ್ನು ಸೇರಿಸುವ ಕುರಿತಂತೆ ಪೋಷಕರಿಂದ ಲಂಚ ಪಡೆಯುತ್ತಿದ್ದ ಬೈಂದೂರು ಕ್ಷೇತ್ರ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಅಧಿಕಾರಿ ನಿತ್ಯಾನಂದ ಆಚಾರ್ ಕಂಬದಕೋಣೆಯಲ್ಲಿ ಉಡುಪಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಇಂದು  ಸಂಜೆ ನಾಲ್ಕು ಗಂಟೆಯ ವೇಳೆಗೆ ನಡೆದಿದೆ.

ಘಟನೆಯ ವಿವರ:
    ತಮ್ಮ ಪುತ್ರ ಪ್ರಜ್ವಲ್(4)ಗೆ ಎಲ್‌ಕೆಜಿಗೆ ಕಂಬದಕೋಣೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಗೆ ದಾಖಲಾತಿ ಬಯಸಿ ಶಿಕ್ಷಣ ಹಕ್ಕು ಕಾಯಿದೆಯಡಿ ನಾಗೂರಿನ ಕಟಾರಿ ಹೊಸಹಿತ್ಲು ಗಂಗಾಧರ ಎಂಬುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಪುರಸ್ಕೃತಗೊಂಡಿದ್ದು ಈ ಬಗ್ಗೆ ಮೊಬೈಲ್‌ನಲ್ಲಿ ಎಸ್‌ಎಂಎಸ್ ಕೂಡ ಬಂದಿತ್ತು. ಆದರೆ ಕಂಬದಕೋಣೆಯ ಸಮೂಹ ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಅವರು ನಿಮ್ಮ ಮಗುವನ್ನು ಆರ್‌ಟಿಇಯಡಿ ದಾಖಲು ಮಾಡಬೇಕಾದರೆ ಕೇವಲ ಆನ್‌ಲೈನ್‌ನಲ್ಲಿ ಸೀಟು ಖಾತ್ರಿಯಾದರೆ ಸಾಲದು, ಮಗುವಿನ ದಾಖಲಾತಿಯ ಮೂಲ ಪ್ರತಿಗೆ ನಮ್ಮ ಸಹಿ ಅಗತ್ಯ, ಅದಕ್ಕ್ಕೆ ಸಹಿ ಹಾಕಬೇಕಾದರೆ 10 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಶರತ್ತಿಗೆ ಮಣಿದ ಮಗುವಿನ ತಂದೆ ಗಂಗಾಧರ್ 8,000 ರೂಪಾಯಿ ನೀಡಲು ಡೀಲ್ ಕುದುರಿಸಿದ್ದರು. 
      ಈ ನಡುವೆ ಸಿ.ಆರ್.ಪಿಯ ಲಂಚಾವರತಾರದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅವರ ಸಲಹೆಯಂತೆ ಇಂದು ಕಂಬದಕೋಣೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ ಹಣ ಪಡೆಯುವಂತೆ ನಿತ್ಯಾನಂದನಿಗೆ ಪೋಷಕರು ತಿಳಿಸಿದ್ದರು. ನಿತ್ಯಾನಂದ ಅವರನ್ನು ಕಂಬದಕೋಣೆ ಜಂಕ್ಷನ್ ಬಳಿ ಭೇಟಿಯಾಗಿ 8000ರೂ ಹಣ ಪಡೆಯುತ್ತಿದ್ದ ವೇಳೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಸ್ಥಳದಲ್ಲಿಯೇ ಹಿಡಿದಿದ್ದಾರೆ.
     ದಾಳಿಯಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ನಾಗೇಶ್ ಶೆಟ್ಟಿ, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಕಷ್ಣಾನಂದ ನಾಯಕ್, ಮೋಹನ್ ಕೊಠಾರಿ, ಸಿಬ್ಬಂದಿಗಳಾದ ನಾಗೇಶ ಉಡುಪ, ರಿಯಾಜ್ ಅಹಮದ್, ರಘುರಾಮ, ಸತ್ಯಾವತಿ, ಶ್ರೀಧರ, ದಿನೇಶ, ಅಶೋಕ, ಶಿವರಾಯ ಬಿಲ್ಲವ, ಲಕ್ಷ್ಮೀಧರ ಸೇತು, ದಿವಾಕರ ಶರ್ಮ, ಸಂತೋಷ ಪಾಲ್ಗೊಂಡಿದ್ದರು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com