ಉಡುಪಿ: ತನ್ನ ಹೆತ್ತವರನ್ನು ಮರದ ಸೊಂಟೆಯಿಂದ ಹೊಡೆದು ಸಾಯಿಸಿದ ಆರೋಪ ಎದುರಿಸುತ್ತಿರುವ ಹೆಗ್ಗುಂಜೆ ಗ್ರಾಮದ ಹೊನ್ನೆಕುಂಬ್ರಿ ನಿವಾಸಿ ಸುರೇಶ ಮರಕಾಲ(29) ಎಂಬಾತನಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2012ರ ಮೇ 3ರಂದು ತಂದೆ ತಾಯಿಯಾದ ಹೆರಿಯ ಮರಕಾಲ ಮತ್ತು ಬಾಬಿ ಮರಕಾಲ್ತಿ ತನ್ನ ಖರ್ಚಿಗೆ ಹಣ ಕೊಡುವುದಿಲ್ಲ ಎಂಬ ವಿಷಯಕ್ಕೆ ಜಗಳವಾಡಿ ಬೆಳಗ್ಗಿನ ಜಾವ 3.30ರ ಸುಮಾರಿಗೆ ಮರದ ಸೊಂಟೆಯಿಂದ ಇಬ್ಬರ ತಲೆಗೆ ಹೊಡೆದು ಸಾಯಿಸಿ ಅವರನ್ನು ಎಳೆದುಕೊಂಡು ಹೋಗಿ ಮನೆ ಸಮೀಪದ ಗೇರು ಹಾಡಿಯಲ್ಲಿ ಎಸೆದಿದ್ದ
ಸುಧೀರ್ಘ ವಿಚಾರಣೆ ಬಳಿಕ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್ ಗುರುವಾರ ತೀರ್ಪು ನೀಡಿದ್ದು ಐಪಿಸಿ ಕಲಂ 302ರ ಕಾಯ್ದೆ ಪ್ರಕಾರ ಆರೋಪಿ ತಪ್ಪಿತಸ್ಥನೆಂದು ಸಾಬೀತಾಗಿದ್ದರಿಂದ ಈತನಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ. ಬ್ರಹ್ಮಾವರ ಠಾಣೆಯ ಪಿಎಸ್ಐ ಗಿರೀಶ್ಕುಮಾರ್ ಎಫ್ಐಆರ್ ಸಲ್ಲಿಸಿದ್ದರೇ, ಸಿಪಿಐ ಡಿ.ಟಿ.ಪ್ರಭು ಚಾರ್ಜ್ಶೀಟ್ ಸಲ್ಲಿಸಿದ್ದರು. ಸರಕಾರದ ಪರ ಸರಕಾರಿ ಅಭಿಯೋಜಕ ಟಿ.ಎಸ್.ಚಿತ್ತೂರಿ, ಎಂ.ಮಂಜುನಾಥ ಭಟ್ ಮತ್ತು ಪ್ರಧಾನ ಸರಕಾರಿ ಅಭಿಯೋಜಕ ಪುಷ್ಪರಾಜ ಕೆ.ಅಡ್ಯಂತಾಯ ವಾದಿಸಿದ್ದರು.