ಕೋಟ: ಗ್ರಾಹಕನ ಸೋಗಿನಲ್ಲಿ ಸಿಂಡಿಕೇಟ್ ಬ್ಯಾಂಕಿನ ಹಳ್ಳಾಡಿ ಶಾಖೆಗೆ ಬಂದ ಯುವಕನೊರ್ವ ಬಾಂಬ್ ಬೆದರಿಕೆ ಹಾಕಿ ಬ್ಯಾಂಕ್ ದರೋಡೆಗೆ ಯತ್ನಿಸಿ, ಕೊನೆಗೆ ಸಿಕ್ಕಿಬಿದ್ದ ಪ್ರಕರಣ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಆರೋಪಿಯನ್ನು ಹಾಲಾಡಿ ಸಮೀಪದ ಹೈಕಾಡಿ ನಿವಾಸಿ ಅಜಿತ್ ಶೆಟ್ಟಿ (23) ಎಂದು ಗುರುತಿಸಲಾಗಿದೆ.

ಮಧ್ಯಾಹ್ನ 12 ಗಂಟೆ ವೇಳೆ ವ್ಯಕ್ತಿಯೊಬ್ಬ ಸ್ಕೂಟರ್ನಲ್ಲಿ ಬಂದು ಹೆಲ್ಮೆಟ್, ಜರ್ಕಿನ್ ಹಾಕಿಯೇ ಬ್ಯಾಂಕ್ ಒಳಗಡೆ ಪ್ರವೇಶಿಸಿದ್ದ. ಬ್ಯಾಂಕ್ನವರು ವಿಚಾರಿಸಿದಾಗ ಹೆಲ್ಮೆಟ್ ತೆಗೆಯಲು ಆಗುತ್ತಿಲ್ಲ ಎಂದು ಹೇಳಿ ಅಲ್ಲೇ ಕುಳಿತಿದ್ದ. ಈತನ ಚಲನವಲನಗಳನ್ನು ಬ್ಯಾಂಕಿನ ಮ್ಯಾನೇಜರ್ ಜಯಂತ್ ಬಿ. ವೀಕ್ಷಿಸುತ್ತಿದ್ದುದಲ್ಲದೇ ಸಿಬ್ಬಂದಿಯ ಬಳಿ ಆತನನ್ನು ವಿಚಾರಿಸುವಂತೆ ತಿಳಿಸಿದ್ದರು. ಬ್ಯಾಂಕಿನಲ್ಲಿ ಜನಸಂದಣಿ ಕಡಿಮೆಯಾಗುತ್ತಿದ್ದಂತೆಯೇ ಕ್ಯಾಶ್ ಕೌಂಟರ್ ಬಳಿ ಬಂದ ಯುವಕ ತನ್ನ ಬ್ಯಾಗ್ ನಿಂದ ಕಪ್ಪ ಬಣ್ಣದ ವಸ್ತುವೊಂದನ್ನು ತೆಗೆದು ಅದನ್ನು ಕ್ಯಾಶ್ ಕೌಂಟರ್ ಬಳಿ ಎಸೆದು ತನ್ನ ಬ್ಯಾಗಿನಲ್ಲಿದ್ದ ರಿಮೋಟ್ ತರಹದ ವಸ್ತುವನ್ನು ಹೊರತೆಗೆದು ಇದು ಬಾಂಬ್ ಆಗಿದ್ದು ತನಗೆ 50ಲಕ್ಷ ಹಣ ನೀಡಿ ಇಲ್ಲದಿದ್ದರೆ ಇಲ್ಲಿಯೇ ಸ್ಪೋಟಿಸುವುದಾಗಿ ಬ್ಯಾಂಕ್ ನ ಸಿಬ್ಬಂದಿಗಳನ್ನು ಬೆದರಿಸಿದ.

ಕೈಯಲ್ಲಿ ಪಿಸ್ತೂಲು ಹಿಡಿದಿದ್ದ. ಈತ ನಕಲಿ ಪಿಸ್ತೂಲನ್ನು ಹಿಡಿದು ಬೆದರಿಸುತ್ತಿದ್ದಾನೆ ಎಂಬುದನ್ನು ಅರಿತ ಬಾಂಕ್ ನ ಮ್ಯಾನೇಜರ್ ಯುವಕನ ಮನವೊಲಿಸಿ, ಹಣ ಕೊಡುವ ನಾಟಕವಾಡಿ ಬ್ಯಾಂಕ್ ನ ಕ್ಲರ್ಕ್ ಸ್ಟಾನಿ ಡಿಸೋಜಾ, ಹಾಗೂ ಅಟೆಂಡರ್ ಸಂದೀಪ್ ನಾಯ್ಕ್ ಅವರೊಂದಿಗೆ ಆರೋಪಿಯ ಮೇಲೆ ಎಗರಿ ಬೀಳುತ್ತಾರೆ. ಅಲ್ಲಿಂದಲೂ ಆತ ತಪ್ಪಿಸಿಕೊಂಡು ಹೊರಗೆ ಬರುತ್ತಿರುವಾಗ ಆತನ ತಲೆ ಗೋಡೆಗೆ ಬಡಿದಿದೆ. ಕೂಡಲೇ ಆತನನ್ನ ಸ್ಥಳೀಯರ ಸಹಕಾರದಿಂದ ಹಿಡಿದು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಕೋಟ ಪೊಲೀಸರು ಅಜಿತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಾರೆ. ಘಟನಾ ಸ್ಥಳಕ್ಕೆ ಸಿಂಡಿಕೇಟ್ ಬ್ಯಾಂಕ್ ಡಿಜಿಎಂ ಅನಂತ್ ನಾಯಕ್, ಮುಖ್ಯ ಪ್ರಬಂಧಕ ಸುಬ್ರಹ್ಮಣ್ಯ ಭಟ್, ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ಬಿ.ನಾಯಕ್, ಕೋಟ ಠಾಣಾಧಿಕಾರಿ ಕೆ.ಆರ್. ನಾಯಕ್ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆರೋಪಿ ಅಜಿತ್ ವಿಚಾರಣೆಯ ವೇಳೆ ತಾನು ಯಾವುದೋ ಜಾಲದಿಂದ ಚಿನ್ನ ಖರೀದಿಸಿ ಮೋಸಹೊಗಿದ್ದು ಮುಂದಿನ ತಿಂಗಳು ತಂಗಿಯ ಮದುವೆ ಇರುವುದರಿಂದ ಈ ಕೃತ್ಯ ಏಸಗಿದ್ದಾಗಿ ತಿಳಿಸಿದ್ದಾನೆ. ಇನ್ನಷ್ಟು ವಿಚಾರಣೆಯಿಂದ ಸತ್ಯ ಹೊರಬರಬೇಕಾಗಿದೆ.