ಯಕ್ಷಗಾನ ಕಲಾವಿದ ಅರಾಟೆ ಮಂಜುನಾಥ ನಿಧನ

ಕುಂದಾಪುರ: ಬಡಗುತಿಟ್ಟಿನ ಅಗ್ರಮಾನ್ಯ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥ (73 ) ಅವರು ಜ. 30ರಂದು ಗಾವಳಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.

ಯಕ್ಷಲೋಕದ ಮಿನುಗುತಾರೆ, ಮಾಯಾಂಗನೆ ಎಂದು ಅಭಿಮಾನಿ ಗಳಿಂದ ಕರೆಸಿಕೊಂಡ ಅವರು ಪುಂಡು ವೇಷಧಾರಿಯಾಗಿ, ಸ್ತ್ರೀವೇಷಧಾರಿಯಾಗಿ, ಮೇಳದ ಸಂಚಾಲಕರಾಗಿ, ಶ್ರೇಷ್ಠ ಸಂಘಟಕರಾಗಿದ್ದರು. ಅವರು ಮಟಪಾಡಿ ಶ್ರೀನಿವಾಸ ನಾಯಕ್‌ ಹಾಗೂ ಗುರು ವೀರಭದ್ರ ನಾಯಕ್‌ ಅವರ ಶಿಷ್ಯನಾಗಿ ಸುಮಾರು 55 ವರ್ಷಗಳ ಕಾಲ ಬಡಗುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಎಲ್ಲ ವಿಧದ ವೇಷ

ಗಳನ್ನು ಸೊಗಸಾಗಿ ನಿರ್ವಹಿಸಿದ್ದರು. ಅವರ ನೆಚ್ಚಿನ ಪಾತ್ರ "ಭೀಷ್ಮ ವಿಜಯ'ದ ಅಂಬೆಯ ಪಾತ್ರದಲ್ಲಿ ಅಭಿನಯಿಸುತ್ತಿರುವಾಗ ಸುಮಾರು 7 ವರ್ಷಗಳ ಹಿಂದೆ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ರಂಗದಲ್ಲಿ ಕುಸಿದ ಅವರು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಆಗ ದೇಹದ ಒಂದು ಭಾಗದ ಚೈತನ್ಯವನ್ನು ಕಳೆದುಕೊಂಡಿದ್ದರು.

ತೆಂಕು- ಬಡಗು ತಿಟ್ಟಿನ ಖ್ಯಾತ ಸ್ತ್ರೀ ಭೂಮಿಕೆಗೊಪ್ಪುವ ಅಂಗಸೌಷ್ಠವ, ಕಂಠಸಂಪತ್ತು, ಲಾಲಿತ್ಯಪೂರ್ಣ ನೃತ್ಯ, ಅಭಿನಯ ಕೌಶಲ, ಸುಪುಷ್ಟ ರಂಗನಡೆ ಹಾಗೂ ವಾಕ್‌ಚಾತುರ್ಯದಿಂದ ಕಲಾಭಿಮಾನಿಗಳ ಮನಸಲ್ಲಿ ಸ್ಥಾಯಿಯಾಗಿ ನೆಲೆನಿಲ್ಲುವಂತೆ ಪಾತ್ರಗಳನ್ನು ಕಟ್ಟುತ್ತಿದ್ದ ಅರಾಟೆ ಅವರು ಬಾಲ ಕಲಾವಿದರಾಗಿ ಮಂದಾರ್ತಿ ಮೇಳದಲ್ಲಿ ರೇಣುಕಾ ಮಹಾತ್ಮೆಯ ಪರಶುರಾಮನಾಗಿ ಗುರುತಿಸಿಕೊಂಡವರು.

ಅರಾಟೆಯವರ ಅಂಬೆ, ದಮಯಂತಿ, ಶಶಿಪ್ರಭೆ, ದಾಕ್ಷಾಯಿಣಿ, ಚಂದ್ರಮತಿ, ಸುಭದ್ರೆ, ಸೀತೆ, ಮೀನಾಕ್ಷಿ, ಮೋಹಿನಿ, ಪ್ರಭಾವತಿ, ಶ್ರೀದೇವಿ,

ಚಿತ್ರಾಂಗದೆ, ದ್ರೌಪದಿ ಮೊದಲಾದ ಸ್ತ್ರೀಪಾತ್ರಗಳ ಜತೆಗೆ ಕೃಷ್ಣ, ಅಶ್ವತ್ಥಾಮರಂತಹ ಪುರುಷ ಪಾತ್ರಗಳಲ್ಲಿ ಮಿಂಚಿದ ಅದ್ಭುತ ಪ್ರತಿಭೆಯಾಗಿದ್ದರು. ಅಲ್ಲದೆ ಟೆಂಟ್‌ ಮೇಳಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಹೊಸ ಆಧುನಿಕ ಪ್ರಸಂಗಗಳ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದರು. ಅವರಿಗೆ

ಪ್ರಸಿದ್ಧಿಯನ್ನು ತಂದುಕೊಟ್ಟ ಬಡಗುತಿಟ್ಟಿನ ಕಸೆವೇಷದಿಂದ ಗುರುತಿಸಲ್ಪಡುವ ದ್ರೌಪದಿ, ಮೀನಾಕ್ಷಿ, ಪದ್ಮಗಂಧಿ, ಪ್ರಮೀಳೆ ನೆನಪಿಸುವಂತಹದು.

ಕೋಡಂಗಿಯಿಂದ...

ಗುಲ್ವಾಡಿ ಸಮೀಪದ ಕರ್ಕಿ ರಾಮ ನಾಯ್ಕ ಮತ್ತು ಮಂಜಮ್ಮ ದಂಪತಿಯ ಹಿರಿಯ ಪುತ್ರರಾಗಿ ಜನಿಸಿದ ಇವರು ನಾಲ್ಕನೇ ತರಗತಿಯ ವಿದ್ಯಾಭ್ಯಾಸಕ್ಕೆ ಮೊಟಕುಗೊಳಿಸಿ ಮಾರಣಕಟ್ಟೆಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆ ಕಟ್ಟಿದವರು. ಸಾಲಿಗ್ರಾಮ ಮೇಳ ಮತ್ತು ಅರಾಟೆಯವರಿಗೂ ಅವಿನಾಭಾವ ಸಂಬಂಧವಿದ್ದು ಅವರು ದೀರ್ಘ‌ ಕಾಲ ಸಾಲಿಗ್ರಾಮ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಕಾಳಿಂಗ ನಾವಡ ಅವರ "ನಾಗಶ್ರೀ' ಪ್ರಸಂಗದಲ್ಲಿ ಪ್ರಭಾಂಗಿಯ ಪಾತ್ರ ಅವರಿಗೆ ಅಪಾರ ಜನಮನ್ನಣೆ ಗಳಿಸಿಕೊಟ್ಟಿತು.

ಹಳ್ಳಾಡಿಯಲ್ಲಿ ಗಣೇಶ ಪ್ರವಾಸಿ ಯಕ್ಷಗಾನ ಸಂಸ್ಥೆಯನ್ನು ಸ್ಥಾಪಿಸಿ ಯಕ್ಷಗಾನ ತರಬೇತಿ ನೀಡಿರುವ ಅರಾಟೆಯವರು ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಳೆಗಾಲದಲ್ಲಿ ಸ್ವಂತ ಮೇಳ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರದರ್ಶನಗಳನ್ನು ನೀಡುತ್ತಿದ್ದರು. ಇವರು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಪಡೆದಿದ್ದಾರೆ.

ಸಚಿವ ವಿನಯ ಕುಮಾರ್‌ ಸೊರಕೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೋಪಾಲ ಪೂಜಾರಿ, ಬೈಂದೂರು ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ್‌ ಶೆಟ್ಟಿ , ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com