ಕೋಟ: ಬಡಗುತಿಟ್ಟು ಯಕ್ಷಗಾನ ರಂಗಭೂಮಿ ಪರಂಪರೆಯ ಹಿರಿತನದಲ್ಲಿ ಮೆರೆದ ಹಿರಿಯ ಯಕ್ಷಗಾನ ಕಲಾವಿದ ಮೊಳವಳ್ಳಿ ಹೆರಿಯ ನಾಯ್ಕ (82) ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು.
ಮಣಿಪಾಲದಿಂದ ಮಣೂರಿನ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ತಂದು ನಂತರ ಹುಟ್ಟೂರಾದ ಮೊಳವಳ್ಳಿಯಲ್ಲಿ ಅಂತಿಮಕ್ರಿಯೆ ಜರುಗಿತು. ಅವರಿಗೆ ಪತ್ನಿ, ಆರು ಮಂದಿ ಪುತ್ರರು ಹಾಗೂ ಮೂರು ಮಂದಿ ಪುತ್ರಿಯರು ಇದ್ದಾರೆ.
ತನ್ನ 16ನೇ ವಯಸ್ಸಿನಲ್ಲಿ ಬಣ್ಣದ ಬದುಕಿಗೆ ಕಾಲಿಟ್ಟ ಮೊಳವಳ್ಳಿ ನಾಯ್ಕ ಬಡಗುತಿಟ್ಟಿನ ಎರಡು ಪ್ರಮುಖ ಶೈಲಿಗಳಾದ ಹಾರಾಡಿ-ಮಟಪಾಡಿ ಶೈಲಿಗಳೆರಡರಲ್ಲೂ ಪರಿಣತಿಯನ್ನು ಹೊಂದಿದ್ದರು. ಮಂದಾರ್ತಿ, ಮಾರಣಕಟ್ಟೆ , ಸೌಕೂರು, ಹಾಲಾಡಿ, ಅಮೃತೇಶ್ವರೀ, ಕಮಲಶಿಲೆ, ಸಾಲಿಗ್ರಾಮ, ಪೆರ್ಡೂರು, ಗೋಳಿಗರಡಿ, ಕೊಲ್ಲೂರು, ರಾಜರಾಜೇಶ್ವರೀ ಮೇಳಗಳಲ್ಲಿ ಗೆಜ್ಜೆಕಟ್ಟಿ ಕುಣಿದು, ವೃತ್ತಿನಿಷ್ಠ ಶ್ರೇಷ್ಠ ಕಲಾವಿದರಾಗಿ ಬೆಳೆದರು. ಸುಧನ್ವ, ಯಯಾತಿ, ತಾಮ್ರಧ್ವಜ, ಶ್ವೇತ ಕುಮಾರ, ಅರ್ಜುನ, ಚಿತ್ರಕೇತು, ಬಬ್ರುವಾಹನ ಮುಂತಾದ ಪಾತ್ರಗಳು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದ್ದವು. 2009ರಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪಡೆದ ಹೆರಿಯ ನಾಯ್ಕರು ಉಡುಪಿ ಯಕ್ಷಗಾನ ರಂಗಭೂಮಿಯ ಪ್ರೊ.ಬಿ.ವಿ. ಆಚಾರ್ಯ ಪ್ರಶಸ್ತಿ, ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರಶಸ್ತಿ, ಬೆಂಗಳೂರಿನ ರಂಗಸ್ಥಳ ಸಂಸ್ಥೆಯ ಪ್ರಶಸ್ತಿ ಸಹಿತ ಹತ್ತಾರು ಪ್ರಶಸ್ತಿ ಅವರಿಗೆ ಸಂದಿದೆ.