ಕೋಟ: ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ, ಜೀವ ಬೆದರಿಕೆವೊಡ್ಡಿ, ಹಲ್ಲೆ ನಡೆಸಿ, ಹಣ ವಸೂಲಿ ಮಾಡಿದ ಸಿನಿಮೀಯ ಮಾದರಿ ಘಟನೆ ಕೋಟ ಸಮೀಪದ ಅಚ್ಲಾಡಿಯಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ರಾಜೇಶ ಶೆಟ್ಟಿ (25) ಅಪಹರಣಕ್ಕೀಡಾದ ಯುವಕ.
ರಾಜೇಶ್ ಶೆಟ್ಟಿ ಹಾಗೂ ಈತನ ಗೆಳೆಯ, ಹತ್ತಿರದ ಸಂಬಂಧಿ ಕುಂದಾಪುರದ ಸಮೀಪದ ಬಸ್ರೂರಿನ ನಿವಾಸಿ ಸುಧೀರ್ ಶೆಟ್ಟಿ ಜತೆಯಾಗಿ ಮೆಡಿಕಲ್ ಎಜೆನ್ಸಿ ಪ್ರಾರಂಭಿಸಿದ್ದರು. ನಷ್ಟವಾದ ಕಾರಣ ಹಲವು ತಿಂಗಳ ಹಿಂದಷ್ಟೆ ಏಜೆನ್ಸಿ ಬಾಗಿಲು ಮುಚ್ಚಿತ್ತು. ರೂ. 1.5 ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ನಷ್ಟದ ಹಣದಲ್ಲಿ ರೂ. 50 ಸಾವಿರ ನೀಡುವಂತೆ ಸುಧೀರ್ ಶೆಟ್ಟಿ ಆಗಾಗ ರಾಜೇಶ್ ಶೆಟ್ಟಿಯನ್ನು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಜತೆಯಾಗಿ ವ್ಯವಹಾರ ಆರಂಭಿಸಿದ್ದರಿಂದ ನಷ್ಟಕ್ಕೆ ಇಬ್ಬರೂ ಸಮಾನ ಹೊಣೆಗಾರರು ಎಂದು ಮೊದಲಿಗೆ ರಾಜೇಶ್ ಶೆಟ್ಟಿ ವಾದಿಸಿದ್ದ. ಅದರಂತೆ ಸುಧೀರ್ ಶೆಟ್ಟಿಗೆ ರಾಜೇಶ್ ಶೆಟ್ಟಿ ರೂ. 25 ಸಾವಿರ ಹಿಂದುರುಗಿದ್ದು, ಉಳಿದ ಹಣ ನೀಡಲು ಸಮಯಾವಕಾಶ ಕೇಳಿದ್ದ ಎನ್ನಲಾಗಿದೆ. ಆದರೆ ಬಾಕಿ ಹಣವನ್ನು ಹಿಂತಿರುಗಿಸದ ಕಾರಣ ರಾಜೇಶ್ ಶೆಟ್ಟಿಯನ್ನು ಸುಧೀರ್ ಪದೇ ಪದೇ ಹಣಕ್ಕಾಗಿ ಪಿಡಿಸುತ್ತಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕಾಗಿ ಬುಧವಾರ ಸಂಜೆ ಸುಮಾರು 6.30ರ ಹೊತ್ತಿಗೆ ಮಾರುತಿ ಓಮ್ನಿ ಕಾರಿನಲ್ಲಿ ಆಗಮಿಸಿದ ಸುಧೀರ್ ಶೆಟ್ಟಿ ಹಾಗೂ ಆತನ ಆರು ಸಂಗಡಿಗರು, ಅಚ್ಲಾಡಿಯ ಸನ್ಶೈನ್ ಕ್ರೀಡಾಂಗಣದ ಬಳಿ ಓಮ್ನಿ ನಿಲ್ಲಿಸಿ ರಾಜೇಶ್ಗಾಗಿ ಕಾದು ಕುಳಿತರು. ರಾಜೇಶ್ ತನ್ನ ಮನೆಗೆ ತೆರಳುವ ಸಂದರ್ಭದಲ್ಲಿ ಆತನನ್ನು ತಡೆದು, ಓಮ್ನಿಯಲ್ಲಿ ಅಪಹರಿಸಿದರು. ಈ ಸಂದರ್ಭದಲ್ಲಿ ರಾಜೇಶನ ಬೈಕನ್ನು ಅಪಹರಣಕಾರರಲ್ಲಿ ಒಬ್ಬ ಚಲಾಯಿಸಿಕೊಂಡು ಹೋದ ಎಂದು ಗೊತ್ತಾಗಿದೆ.
ಅಪಹರಣದ ನಂತರ ಓಮ್ನಿಯಲ್ಲಿ ರಾಜೇಶ್ ಶೆಟ್ಟಿಯನ್ನು ಬಸ್ರೂರು, ಬಿ.ಹೆಚ್ ಕ್ರಾಸ್, ಹೇರಿಕೆರೆ ಮೊದಲಾದ ಸ್ಥಳಗಳಿಗೆ ಸುತ್ತಾಡಿಸಿ ಹಲ್ಲೆ ನಡೆಸಿದ್ದರು ಎಂದು ದೂರಲಾಗಿದೆ. ತದನಂತರ ರಾಜೇಶನ ಸ್ನೇಹಿತ ಕಿರಣ್ ಪೂಜಾರಿಗೆ ಕರೆ ಮಾಡಿದ ಆರೋಪಿಗಳು ಈತನನ್ನು ಜೀವಂತವಾಗಿ ಬಿಡಲು ರೂ. 50 ಸಾವಿರ ಹಣ ನೀಡ ಬೇಕು ಎನ್ನುವ ಬೇಡಿಕೆಯಿಟ್ಟರು. ಜತೆಗೆ ರಾಜೇಶ್ನ ಇನ್ನೊಬ್ಬ ಸ್ನೇಹಿತ ಯೊಗೇಶ್ ಗಾಣಿಗ ಅಚ್ಲಾಡಿ ಅವರನ್ನು ಆರೋಪಿಗಳು ಪೋನ್ ಮೂಲಕ ಸಂಪರ್ಕಿಸಿ, ಪೊಲೀಸರಿಗೆ ವಿಷಯ ತಿಳಿಸಿದ್ದಲ್ಲಿ ರಾಜೇಶ್ನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು.
ಆರೋಪಿಗಳ ಬೆದರಿಕೆಗೆ ಹೆದರಿದ ರಾಜೇಶ್ ಶೆಟ್ಟಿಯ ಸ್ನೇಹಿತರು ರೂ. 50 ಸಾವಿರ ಹಣ ಹೊಂದಿಸಿ, ಆರೋಪಿಗಳಿಗೆ ಹಣ ನೀಡಲು ಕಿರಣ್ ಪೂಜಾರಿ ಒಬ್ಬನನ್ನೇ ಬೈಕ್ನಲ್ಲಿ ಹುಣ್ಸೆಮಕ್ಕಿಗೆ ಕಳುಹಿಸಿದರು. ಆದರೆ ಅಪಹರಣಕಾರರ ತಂಡ ಅಲ್ಲಿರದೆ ಬಸ್ರೂರು ಸಮೀಪದ ಜಪ್ತಿಗೆ ಬರುವಂತೆ ತಿಳಿಸುತ್ತಾರೆ. ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬನ ಕೈಯ್ಯಲ್ಲಿ ರೂ. 50 ಸಾವಿರವನ್ನು ಕಿರಣ್ ಪೂಜಾರಿ ನೀಡಿ ರಾಜೇಶನನ್ನು ಬಿಡುವಂತೆ ಕೇಳಿಕೊಳ್ಳುತ್ತಾನೆ. ಹಣ ಸ್ವೀಕರಿಸಿದ ವ್ಯಕ್ತಿ ಮಾತನಾಡದೆ ಅಲ್ಲಿಂದ ಕಾಲ್ಕೀಳುತ್ತಾನೆ.
ಹಣ ಪಡೆಯುವ ಮುಂಚೆ ಅಪಹರಣಕಾರ ತಂಡ ರಾಜೇಶ್ ಶೆಟ್ಟಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ. ಬಳಿಕ ಹುಣ್ಸೆಮಕ್ಕಿ ಬಸ್ರೂರು ರಸ್ತೆಯ ಕಾಡು ದಾರಿಯಲ್ಲಿ ರಾತ್ರಿ 10.30ರ ಸುಮಾರಿಗೆ ಈತನನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ಹಲ್ಲೆಗೊಳಗಾದ ರಾಜೇಶನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಸ್ನೇಹಿತರು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬ್ರಹ್ಮಾವರ ವತ್ತ ನಿರೀಕ್ಷಕ ಅರುಣ್ ಬಿ.ನಾಯಕ್, ಕೋಟ ಠಾಣಾಧಿಕಾರಿ ಕೆ.ಆರ್.ನಾಯ್ಕ್ ನೇತತ್ವದ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಆರೋಪಿಗಳ ಶೀಘ್ರ ಬಂಧನಕ್ಕೆ ಅಚ್ಲಾಡಿ ಸನ್ಶೈನ್ ಗೆಳೆಯರ ಬಳಗ, ಸಾಬ್ರಕಟ್ಟೆ ವಲಯದ ಜಯ ಕರ್ನಾಟಕ ಸಂಘಟನೆ, ಸಾಬ್ರಕಟ್ಟೆ ಜನನಿ ಯುವ ಕನ್ನಡ ಸಂಘ ಆಗ್ರಹಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.