ಕೋಡಿಯಲ್ಲಿ ಘರ್ಷಣೆ: ಐವರಿಗೆ ಗಾಯ

ಕುಂದಾಪುರ: ಕೋಮುಸೂಕ್ಷ್ಮ ವಾದ ಕೋಡಿ ಸಮೀಪದ ಹಳೆಅಳಿವೆ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡಿದ್ದು, ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ರಾತ್ರಿ 8.30ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಹುಟ್ಟಿಕೊಂಡ ವಿವಾದ ತಾರಕ್ಕೇರಿ ಗಲಭೆಗೆ ಕಾರಣವಾಗಿದೆ. 

ಎರಡು ಕೋಮಿನ ನೂರಾರು ಜನರು ಬೀದಿಗಿಳಿದಿದ್ದು, ವಿದ್ಯುತ್ ಕಡಿತದ ವೇಳೆ ಹೊಡೆದಾಟ ನಡೆಯಿತು. ಮಹಿಳೆಯರು, ಮಕ್ಕಳು, ಯುವಕರು ಗಾಯಗೊಂಡಿದ್ದಾರೆ. ಪೊಲೀಸರು ತಕ್ಷಣ ಧಾವಿಸಿ ಗುಂಪನ್ನು ಚದುರಿಸಿದರು. ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಅನ್ಸರ್ ಮತ್ತು ಆಸೀರ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರೆ, ರಂಜಿತ್ ಮತ್ತು ಭರತ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಕಿನರಾ ಹೋಟೆಲ್ ಸಮೀಪದ ಉಸ್ಮಾನ್‌ರ ಮನೆಗೆ ಕಲ್ಲು ತೂರಾಟ ನಡೆದಿದ್ದು ಕಿಟಕಿ ಗಾಜುಗಳು ಚೂರು ಚೂರಾಗಿದೆ. ಮನೆಯೊಳಗಿದ್ದ ಜೀನತ್ (35)ಗೆ ಗಂಭೀರ ಗಾಯವಾಗಿದ್ದು ಉಡುಪಿ ಆದರ್ಶಗೆ ದಾಖಲಿಸಲಾಗಿದೆ. 

ಪರಿಸರದಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಹುಟ್ಟಿಕೊಂಡ ತಗಾದೆ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ. ಜತೆಗೆ ಹಳೆ ದ್ವೇಷ ಮತ್ತು ಯುವತಿಗೆ ಚುಡಾಯಿಸಿದ ಪ್ರಕರಣವೂ ಇದೆ ಎಂಬ ಮಾಹಿತಿ ಇದೆ. 

ಈ ನಡುವೆ, ಭಾನುವಾರ ರಾತ್ರಿ 9.30ರ ಸುಮಾರಿಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಮೆಡಿಕಲ್‌ನಲ್ಲಿ ಔಷಧಿ ಖರೀದಿ ಮಾಡಿ ಚರ್ಚ್ ರಸ್ತೆಯಲ್ಲಿ ಸಾಗುತ್ತಿದ್ದ ಅವೇಜ್‌ಗೆ 7-8 ಮಂದಿ ಗುಂಪು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಎಡಿಶನಲ್ ಎಸ್ಪಿ ಸಂತೋಷ್‌ಕುಮಾರ್, ಸಿಪಿಐಗಳಾದ ದಿವಾಕರ್, ಅರುಣ್ ಬಿ. ನಾಯಕ್, ಸುದರ್ಶನ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com