ಗಂಗೊಳ್ಳಿಯಲ್ಲಿ ಮತ್ತೆ ಅಂಗಡಿಗೆ ಬೆಂಕಿ. ಪರಿಸ್ಥಿತಿ ಉದ್ವಿಗ್ನ

ಗಂಗೊಳ್ಳಿ: ಇಲ್ಲಿನ  ಒಂದು ಅಂಗಡಿ ಮತ್ತು ಮೂರು ವಾಹನಗಳಿಗೆ ಮಂಗಳವಾರ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಗಂಗೊಳ್ಳಿಯಲ್ಲಿ ನಿರ್ಮಾಣಗೊಂಡಿದೆ. ನಡೆದಿದ್ದು ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ನಾಶವಾಗಿದೆ.  ಬುಧವಾರ ಸಂಭವಿಸಿದ ಗಲಭೆ ಮತ್ತು ಪೊಲೀಸ್ ಲಾಠಿಚಾರ್ಜ್‌ನಲ್ಲಿ ತಲಾ ಒಬ್ಬ ಯುವಕರು ಗಾಯಗೊಂಡಿದ್ದಾರೆ. ಗಂಗೊಳ್ಳಿಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. 

  ಮಂಗಳವಾರ ರಾತ್ರಿ ಗಂಗೊಳ್ಳಿ ಅಂಬಿಕಾ ದೇವಸ್ಥಾನದ ಎದುರುಗಡೆ ಮುಖ್ಯರಸ್ತೆಗೆ ತಾಗಿಕೊಂಡಿರುವ ವೆಂಕಟೇಶ್ ಶೆಣೈ ಮಾಲೀಕತ್ವದ ವೆಂಕಟೇಶ ಕೃಪಾ ಟ್ರೇಡರ್ಸ್‌ನ ಶಟರ್ ಬೀಗ ಮುರಿದು ಬೆಂಕಿ ಹಚ್ಚಲಾಗಿದ್ದು ಅಂಗಡಿಯ ಸೊತ್ತುಗಳು ಸುಟ್ಟು ಕರಕಲಾಗಿದೆ. ಬೆಂಕಿ ಕೆನ್ನಾಲಿಗೆಗೆ ಕಟ್ಟಡ, ಅಂಗಡಿಗೆ ತಾಗಿಕೊಂಡು ನಿಲ್ಲಿಸಲಾಗಿದ್ದ ಎರಡು ಕಾರು, ಎರಡು ಬೈಕ್, ಮಿನಿ ಟೆಂಪೊ ಭಾಗಶಃ ಸುಟ್ಟುಹೋಗಿದೆ. ಪಕ್ಕದಲ್ಲೇ ಮಾಲೀಕ ವೆಂಕಟೇಶ ಶೆಣೈ ನಿವಾಸವಿದ್ದು ಭಾರಿ ಹೊಗೆಯಿಂದ ಎಚ್ಚೆತ್ತು ಹೊರಬರುವಷ್ಟರಲ್ಲಿ ಬೆಂಕಿ ಹಬ್ಬಿತ್ತು. ಸ್ಥಳೀಯರ ನೆರವಿನಿಂದ ತಕ್ಷಣ ಬೆಂಕಿ ನಂದಿಸಲಾಗಿದೆ. ರೂ.8 ಲಕ್ಷ ನಷ್ಟ ಅಂದಾಜಿಸಲಾಗಿದೆ.

    ಬೈಕ್ ಮತ್ತು ಕಾರಿನಲ್ಲಿ ಆಗಮಿಸಿದ ಮೂವರು ದುಷ್ಕರ್ಮಿಗಳು ಈ ಕತ್ಯ ಎಸಗಿರುವುದು ಅಂಗಡಿ ಮಾಲೀಕರ ಮತ್ತು ಸಪ್ತಗಿರಿ ಜ್ಯುವೆಲ್ಲರಿ ಸಮೀಪ ಅಳವಡಿಸಲಾಗಿರುವ ಸಿಸಿ ಟೀವಿಯಲ್ಲಿ ದಾಖಲಾಗಿದೆ. ಅಂಬಿಕಾ ದೇವಸ್ಥಾನದ ಎದುರು ಬೈಕ್ ನಿಲ್ಲಿಸಿದ ದುಷ್ಕರ್ಮಿಗಳು ಅಂಗಡಿಗೆ ಬೆಂಕಿ ಹಚ್ಚಿರುವ ಫೂಟೇಜ್ ಇದೆ.

     ಬೆಳಗ್ಗೆಯೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಬೆಂಕಿ ಹಚ್ಚಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಟಯರ್ ಸುಟ್ಟು, ಮರ ಅಡ್ಡ ಹಾಕಿ ರಸ್ತೆ ತಡೆ ನಡೆಸಿದರು. ಪೊಲೀಸ್ ವಾಹನವನ್ನೂ ಅಡ್ಡಗಟ್ಟಿದರು.

    ಬುಧವಾರ ಅಪರಾಹ್ನ ಕಲೈಕಾರ್ ಮಠ ಸಮೀಪದ ಮುಸ್ಲಿಂ ಕೇರಿಯ ಓಣಿಯಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಸತೀಶ್ ಭಂಡಾರಿ (45) ಅವರ ಮೇಲೆ ಗುಂಪು ಹಲ್ಲೆ ನಡೆಸಿದ್ದು, ಗಂಗೊಳ್ಳಿ ಇನ್ನಷ್ಟು ಕೆರಳುವಂತೆ ಮಾಡಿತು. ಅಲ್ಲಲ್ಲಿ ಕಲ್ಲು ತೂರಾಟ ನಡೆಯಿತು. ಸಾರ್ವಜನಿಕ ಸೊತ್ತುಗಳ ಧ್ವಂಸ ನಡೆಯಿತು. ಪರಿಸ್ಥಿತಿ ಹದ್ದು ಮೀರುತ್ತಿರುವುದನ್ನು ಮನಗಂಡ ಎಸ್ಪಿ ಅಣ್ಣಾಮಲೈ ನೇತತ್ವದ ಪೊಲೀಸ್ ಪಡೆ ಲಘು ಲಾಠಿ ಚಾರ್ಜ್ ನಡೆಸಿತು. ಈ ವೇಳೆ ಒಬ್ಬ ಯುವಕ ಗಾಯಗೊಂಡಿದ್ದಾನೆ.

   ತಾಲೂಕು ದಂಡಾಧಿಕಾರಿ ಗಾಯತ್ರಿ ಎನ್.ನಾಯಕ್ ಆದೇಶದಂತೆ ಗಂಗೊಳ್ಳಿಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಗತ್ಯಬಿದ್ದಲ್ಲಿ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾಗರಿಕರಲ್ಲಿ ಧೈರ್ಯ ಮೂಡಿಸುವ ನಿಟ್ಟಿನಲ್ಲಿ ಬುಧವಾರ ಅಪರಾಹ್ನ ಪೊಲೀಸ್ ಪಥಸಂಚಲನ ನಡೆಸಲಾಯಿತು.

    ಪೊಲೀಸರು ಎರಡು ಕೋಮಿನ 30ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಂಗಡಿಗೆ ಬೆಂಕಿಯಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕೆಯ ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

    ಎಸ್ಪಿ ಅಣ್ಣಾಮಲೈ, ಎಡಿಶನಲ್ ಎಸ್ಪಿ ಸಂತೋಷ್‌ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಭಟ್ಕಳ ಡಿವೈಎಸ್ಪಿ ಅಯ್ಯಪ್ಪ, ಕುಂದಾಪುರ ಉಪವಿಭಾಗದ ಎಲ್ಲಾ ಠಾಣೆಯ ಸಬ್‌ಇನ್ಸ್‌ಪೆಕ್ಟರ್, ಪೊಲೀಸ್ ಸಿಬ್ಬಂದಿಗಳು, ಕೆಎಸ್‌ಆರ್‌ಪಿ ಮತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪೊಲೀಸರು ಗಂಗೊಳ್ಳಿಯಲ್ಲಿ ಬೀಡುಬಿಟ್ಟಿದ್ದು ಬಿಗಿಭದ್ರತೆ ಕೈಗೊಳ್ಳಲಾಗಿದೆ.

    ಗಂಗೊಳ್ಳಿಯಲ್ಲಿ ಬುಧವಾರ ಅಪರಾಹ್ನ ಗಲಭೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಹಲವು ಕಟ್ಟಡಗಳ ಗಾಜು ಹಾನಿಗೀಡಾಗಿದೆ. ಭಟ್ಕಳ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಕಟ್ಟಡ, ಮೊಯಿದ್ದೀನ್ ಮಸೀದಿ ಕಟ್ಟಡ ಮತ್ತು ಪರಿಸರದ ಕೆಲವು ಮನೆಗಳಿಗೆ ಕಲ್ಲು ತೂರಾಟ ನಡೆದಿದ್ದರಿಂದ ಕಿಟಕಿಯ ಗಾಜುಗಳು ಒಡೆದಿವೆ. ಯಾರಿಗೂ ಗಾಯಗಳಾಗಿಲ್ಲ. ಮ್ಯಾಂಗ್‌ನೀಸ್ ರಸ್ತೆಯಲ್ಲಿ ಮನೆಯೊಂದಕ್ಕೆ ನುಗ್ಗುವ ಯತ್ನ ನಡೆದಿದ್ದು ಪರಸ್ಪರ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಉದ್ವಿಗ್ನತೆ ಸಷ್ಟಿಸಿತ್ತು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com