ಅಂಗಡಿಗೆ ನುಗ್ಗಿದ ಕಾರು, ತಪ್ಪಿದ ಭಾರಿ ಅನಾಹುತ

ಕುಂದಾಪುರ: ಇಲ್ಲಿನ ಮಾಸ್ತಿಕಟ್ಟೆ ಜಂಕ್ಷನ್, ಚಿಕ್ಕನ್‌ಸಾಲ್ ರಸ್ತೆ ಸಂಧಿಸುವ ತಿರುವಿನಲ್ಲಿ ಕಾರು ಅಜಾಗರೂಕತೆಯಿಂದ ಸರಣಿ ಡಿಕ್ಕಿ ನಡೆಸಿ ಅಂಗಡಿ ನುಗ್ಗಿದ ಘಟನೆ ಶನಿವಾರ ಅಪರಾಹ್ನ ನಡೆದಿದ್ದು ಭಾರಿ ಅನಾಹುತ ತಪ್ಪಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮಾಸ್ತಿಕಟ್ಟೆ ತಿರುವಿನ ಹಂಪ್ ಪ್ರವೇಶಿಸಿದ ಸ್ಯಾಂಟ್ರೊ ಕಾರು ಮುಖ್ಯರಸ್ತೆಗೆ ತಲುಪುವ ಸನ್ನಾಹದಲ್ಲಿ ಹೊಂಡಾಸಿಟಿ ಕಾರೊಂದಕ್ಕೆ ಲಘು ಡಿಕ್ಕಿ ಹೊಡೆದು ಮುಂದೊತ್ತಿ ಹೋಗಿ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟರ್‌ಗೆ, ನಂತರ ಅಲ್ಲಿಯೇ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಪಕ್ಕದ ಗಣೇಶ್‌ಸ್ಟೋರ್ ಅಂಗಡಿಗೆ ಬಡಿದು ನಿಂತಿದೆ. ಕಾರಿನ ಮುಂಬದಿ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿ ದಿನಕರ ಕಾಂಚನ್ ಎಂಬವರಿಗೆ ಗಾಯವಾಗಿದ್ದು ಅವರನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಸವಾರಿಣಿಗೆ ತರುಚಿದ ಗಾಯವಾಗಿದೆ. ಕಾರು ಚಾಲಕ ರಮೇಶ್ ಪೂಜಾರಿ ವಿರುದ್ಧ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ. 

ಟ್ರಾಫಿಕ್ ಜಾಮ್: ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಚಿಕ್ಕನ್‌ಸಾಲ್ ತಿರುವಿನ ಜಂಕ್ಷನ್‌ನಲ್ಲಿ ಕ್ಷಣಾರ್ಧದಲ್ಲಿ ಸಂಭವಿಸಿದ ಅಪಘಾತದಿಂದ ಕೆಲಹೊತ್ತು ಟ್ರಾಫಿಕ್‌ಜಾಮ್ ಉಂಟಾಯಿತು. ಶಾಲೆಕಾಲೇಜು ವಿದ್ಯಾರ್ಥಿಗಳು, ಉಡುಪಿ, ಮಂಗಳೂರು, ಬೈಂದೂರು, ಭಟ್ಕಳ ಸಾಗುವ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಸ್ಥಳವಿದು. ಮಾಸ್ತಿಕಟ್ಟೆ ರಸ್ತೆಯಿಂದ ಏಕಾಏಕಿ ಮುಖ್ಯರಸ್ತೆಗೆ ಆಗಮಿಸಿದ ಕಾರು ಎದುರಿಗೆ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತ ಜನರು ನಿಲ್ಲುವ ಸ್ಥಳಕ್ಕೆ ಬಂದಿತ್ತು. ಈ ವೇಳೆಯಲ್ಲಿ ವಿರಳ ಸಂಖ್ಯೆಯಲ್ಲಿ ಜನರಿದ್ದುದರಿಂದ ಭಾರಿ ಅನಾಹುತ ತಪ್ಪಿದೆ. ಡಿಕ್ಕಿ ಹೊಡೆಯುತ್ತಲೆ ಸಾಗಿದ ಕಾರು ರಸ್ತೆ ಪಕ್ಕದ ಅಂಗಡಿ ನುಗ್ಗಿ ಗೋಡೆ ಬಡಿದಿತ್ತು. ಅಂಗಡಿ ಫಿಲ್ಲರ್ ಹಾನಿಗೀಡಾಗಿದೆ. ಟ್ರಾಫಿಕ್ ಜಾಮ್ ಸರಿದೂಗಿಸಲು ಸಂಚಾರಿ ಪೊಲೀಸರು ಹರಸಾಹಸ ಪಡಬೇಕಾಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com