ಕುಂದಾಪುರ: ವಡೇರಹೋಬಳಿ ಗ್ರಾಮದಲ್ಲಿ ಗುರುವಾರ ಮೂರು ವರ್ಷದ ಮಗು ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಕಂಪ್ಯೂಟರ್ ಕ್ಲಾಸ್ ಮಾಡಿ ಕೊಂಡಿರುವ ವಡೇರಹೋಬಳಿಯ ರಮೇಶ ದೇವಾಡಿಗ ಅವರ ಮನೆಗೆ ಅವರ ಚಿಕ್ಕಮ್ಮ ಇಂದಿರಾ, ಅವರ ಗಂಡ ವೆಂಕಟೇಶ್ ಮತ್ತು ಮೂರು ವರ್ಷದ ಮಗು ಅಭಿಲಾಶ್ ಬಂದಿದ್ದು ಬೆಳಗ್ಗೆ 10.30ರ ಸುಮಾರಿಗೆ ಎಲ್ಲರೂ ಒಟ್ಟಿಗೆ ಮನೆಯಲ್ಲಿರುವಾಗ ಅಭಿಲಾಶ್ ಕಾಣಿಸದೆ ಇದ್ದು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಮನೆ ಸಮೀಪದ ಕೆರೆಯಲ್ಲಿ ತಡಕಾಡಿದಾಗ ಮಗು ಪತ್ತೆಯಾಗಿದೆ. ತಕ್ಷಣ ಮಗುವನ್ನು ಮೇಲಕ್ಕೆತ್ತಿ ಆಟೋದಲ್ಲಿ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಮತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆಟವಾಡುತ್ತ ತೆರಳಿದ ಮಗು ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ರಮೇಶ್ ದೇವಾಡಿಗ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.