ತಿರುಗಿ ಬಿದ್ದ ಹೆಬ್ಬಾವು, ಒಬ್ಬ ಆಸ್ಪತ್ರೆಗೆ ದಾಖಲು

ಕೋಟೇಶ್ವರ: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಹೆಬ್ಬಾವು ಸೆರೆಹಿಡಿಯಲು ಮುಂದಾದ ಯುವಕರಿಗೆ ಹಾವು ನೀಡಿದ ತಿರುಗೇಟಿನಿಂದಾಗಿ ಆಸ್ಪತ್ರೆಗೆ ದಾಖಲುಗೊಳ್ಳುವ ಪ್ರಮೇಯ ಎದುರಾದ ಘಟನೆ ಬುಧವಾರ ರಾತ್ರಿ ಬಾಬು ಟಯರ್ ಎದುರುಗಡೆ ನಡೆದಿದೆ.

  ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಹೆಬ್ಬಾವು ಕಂಡ ಯುವಕರು ತಕ್ಷಣ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. 12 ಅಡಿ ಉದ್ದದ ಹೆಬ್ಬಾವು ಹೆದ್ದಾರಿ ದಾಟುತ್ತಿರುವಂತೆಯೇ ಟ್ರಾಫಿಕ್ ಜಾಮ್ ಉಂಟಾಗಿದೆ. ಅಷ್ಟರಲ್ಲಿ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಹಾವು ಹೆದ್ದಾರಿಯಿಂದ ಬದಿಗೆ ಸರಿಯುತ್ತಿದ್ದಂತೆ ಅಧಿಕಾರಿಗಳ ಸಮ್ಮುಖವೇ ನಾಲ್ವರು ಯುವಕರು ಹಾವನ್ನು ಸೆರೆಹಿಡಿಯಲು ಮುಂದಾದರು.

ಬಾಲಕ್ಕೆ ಕೈಹಾಕುತ್ತಿದ್ದಂತೆ ತಿರುಗಿ ಬಿದ್ದ ಹೆಬ್ಬಾವು ನೇರವಾಗಿ ಕಡಿದಿದೆ. ಹಾವು ಕಡಿತಕ್ಕೆ ಮಾರ್ಕೋಡು ನಿವಾಸಿ ಮಾರುತಿ(25) ಕೈಗೆ ಭಾರಿ ಏಟು ಬಿದ್ದಿದೆ. ಕಡಿತದಿಂದ ಬಲಕೈಯಲ್ಲಿ ಒಂದೆ ಸವನೆ ರಕ್ತ ಹರಿದಿದೆ. ಬೆದರದ ಯುವಕರು, ಸ್ಥಳೀಯರು ಮತ್ತು ಇಲಾಖಾಧಿಕಾರಿಗಳ ಸಹಕಾರದಿಂದ ಹರಸಾಹಸಪಟ್ಟು ಹೆಬ್ಬಾವು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಬ್ಬಾವು ಏಟಿಗೆ ಗಾಯಗೊಂಡಿರುವ ಯುವಕನನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಮೂವರಿಗೂ ಅಲ್ಪಸ್ವಲ್ಪ ಗಾಯವಾಗಿದೆ. ಹೆಬ್ಬಾವು ಪ್ರಹಸನದಿಂದಾಗಿ ಹೆದ್ದಾರಿಯಲ್ಲಿ ಅರ್ಧತಾಸಿಗೂ ಸಂಚಾರ ವ್ರತ್ಯಯ ಉಂಟಾಯಿತು.

ಅಭಯಾರಣ್ಯಕ್ಕೆ: ಕೋಟೇಶ್ವರದಲ್ಲಿ ಸೆರೆಹಿಡಿಯಲಾದ ಹೆಬ್ಬಾವು ಸರಿಸುಮಾರು 12 ಅಡಿ ಇದ್ದು ಜಡ್ಕಲ್-ಞ;ಮುದೂರು ವ್ಯಾಪ್ತಿಯ ಅಭಯಾರಣ್ಯಕ್ಕೆ ರವಾನಿಸಲಾಗಿದೆ. ಗಾಯಾಳು ಯುವಕನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com