ಗಂಗೊಳ್ಳಿಯಲ್ಲಿ ಅಂಗಡಿಗಳಿಗೆ ಬೆಂಕಿ- ಪ್ರಕ್ಷುಬ್ಧ ವಾತಾವರಣ; ಜನಪ್ರತಿನಿಧಿಗಳ ಭೇಟಿ

ಗಂಗೊಳ್ಳಿ: ಗುರುವಾರ ರಾತ್ರಿ ಗಂಗೊಳ್ಳಿಯಲ್ಲಿ ಸಂಭವಿಸಿದ ಗುಂಪು ಘರ್ಷಣೆ ಭಾಗವಾಗಿ ಹಿಂಸಾಕಾಂಡ ಮುಂದುವರಿದಿದ್ದು ಶುಕ್ರವಾರ ತಡರಾತ್ರಿ ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್‌ನಲ್ಲಿರುವ 10 ಅಂಗಡಿ ಕೋಣೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸ್ಥಳೀಯರು ಎಚ್ಚೆತ್ತು ಬರುವಷ್ಟರಲ್ಲಿ ಕಾಂಪ್ಲೆಕ್ಸ್‌ನಲ್ಲಿದ್ದ 10 ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಕಾಂಪ್ಲೆಕ್ಸ್‌ನಲ್ಲಿರುವ ಮಹಮದ್ ಅಹಮದ್ ಎಂಬವರಿಗೆ ಸೇರಿರುವ ಕರಾವಳಿ ಎಂಟರ್‌ಪ್ರೈಸಸ್ ಹಾರ್ಡ್‌ವೇರ್‌ನ 5 ಅಂಗಡಿ ಕೋಣೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ. ಕಂಪ್ಯೂಟರ್, ಪೈಂಟ್ ಮಿಕ್ಸಿಂಗ್ ಮಿಶನ್, ಪ್ಲೈವುಡ್, ಗ್ಲಾಸ್, ತಗಡು, ಫರ್ನಿಚರ್, ಶೆಟರ್, ಯಂತ್ರೋಪಕರಣಗಳು ಸೇರಿದಂತೆ ಬೆಲೆಬಾಳುವ ಅಂಗಡಿಯ ಅಷ್ಟು ಸೊತ್ತುಗಳು ಸುಟ್ಟುಕರಲಾಗಿದೆ.  ಇದಕ್ಕೆ ಹೊಂದಿಕೊಂಡಿರುವ ರಿಜ್ವಾನ್ ಎಂಬವರಿಗೆ ಸೇರಿರುವ ಎಂ.ಎಂ.ಕಲೆಕ್ಷನ್‌ನ ಫ್ಯಾನ್ಸಿ ಎಂಡ್ ಗಿಪ್ಟ್ ಸೆಂಟರ್‌ನ 4 ಅಂಗಡಿಕೋಣೆಗಳು ಸುಟ್ಟುಹೋಗಿದೆ. ಅಲ್ಲದೆ ಮಹಮದ್ ಗೌಸ್ ಎಂಬವರಿಗೆ ಸೇರಿರುವ ಟೈಲರ್ ಅಂಗಡಿ ಭಸ್ಮವಾಗಿದೆ. ಹೊಲಿಗೆಗೆ ಕೊಟ್ಟ ಬಟ್ಟೆಗಳು, ಹೊಲಿಗೆಯಂತ್ರಗಳು ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿಯ ಆರ್ಭಟಕ್ಕೆ ಕಾಂಪ್ಲೆಕ್ಸ್‌ನ ಕಟ್ಟಡ ಜರ್ಜರಿತವಾಗಿದೆ. ಕುಂದಾಪುರ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು, ಪೊಲೀಸರು ಸ್ಥಳೀಯರ ನೆರವಿನಿಂದ ಬೆಂಕಿ ತಹಬಂದಿಗೆ ತಂದಿದ್ದಾರೆ. ಅಂದಾಜು 2.50ಕೋಟಿ ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
 ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಪ್ರದೇಶದಲ್ಲಿ ಪ್ರಕ್ಷುಬ್ಧತೆ ನೆಲೆಸಿದ್ದು ಗಂಗೊಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

ಕಾಂಪ್ಲೆಕ್ಸ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ನಾಗರಿಕರು ಆಕ್ರೋಶ ಹೊರಗೆಡಹಿದರು. ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. ಘಟನೆ ಖಂಡಿಸಿ ಬೆಳಕು ಹರಿಯುವವರೆಗೂ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು. 

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಸಿ.ಬಿ.ಪಾಟೀಲ್, ಸಿಪಿಐಗಳಾದ ಸುದರ್ಶನ್, ದಿವಾಕರ್, ಠಾಣಾಧಿಕಾರಿಗಳಾದ ಗೋವರ್ಧನ್, ದೇಜಪ್ಪ, ಜಯಂತ್, ಸಂತೋಷ್ ಕಾಯ್ಕಿಣಿ, ಇಮ್ರಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕು ದಂಡಾಧಿಕಾರಿ ಗಾಯತ್ರಿ ನಾಯಕ್ ಸಂತ್ರಸ್ತರನ್ನು ಭೇಟಿ ಮಾಡಿ ನಷ್ಟದ ವಿವರ ಪಡೆದರು. 

ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳ ಕತ್ಯಕ್ಕೆ ಸುಟ್ಟುಹೋದ ಗಂಗೊಳ್ಳಿ ಜಾಮೀಯಾ ಕಾಂಪ್ಲೆಕ್ಸ್ ವಠಾರಕ್ಕೆ ಶನಿವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಭೇಟಿ ನೀಡಿ ಪರಿಶೀಲಿಸಿದರು. 

ಸೌಹಾರ್ದ ಕೆಡಿಸುವವರ ವಿರುದ್ಧ ಕ್ರಮ: ಗಂಗೊಳ್ಳಿಯಲ್ಲಿ ಸೌಹಾರ್ದತೆ ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಸೌಹಾರ್ದತೆ ಸಹಿಸದ ಶಕ್ತಿಗಳು ನಡೆಸುವ ಕುಕತ್ಯಗಳಿಗೆ ನಾಗರಿಕರು ಜಗ್ಗಬಾರದು. ಪ್ರದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ಕತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೆ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಸಲ್ಲಿಸಲಾಗುವುದು ಎಂದು ಸಚಿವ ಸೊರಕೆ ಭರವಸೆ ನೀಡಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಸಂತ್ರಸ್ತರಿಗೆ ಧೈರ್ಯ ತುಂಬಿದರು. 

ಬ್ಲೋಸಂ ಫರ್ನಾಂಡೀಸ್, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಉಡುಪಿ ಎಸ್ಪಿ ರಾಜೇಂದ್ರಪ್ರಸಾದ್, ಕಾಂಗ್ರೆಸ್ ಮುಖಂಡರಾದ ಪಿ.ಎಲ್.ಜೋಸ್, ರಾಜು ದೇವಾಡಿಗ, ಎಂ.ಎ.ಗಪೂರ್ ಮೊದಲಾದವರು ಇದ್ದರು.

ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜನೆ: ಕೋಮುಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿ ಅಂಗಡಿಗೆ ಬೆಂಕಿ ಹಚ್ಚಿರುವ ಪ್ರಕರಣದಿಂದಾಗಿ ಬೂದಿ ಮುಚ್ಚಿದ ಕೆಂಡದಂತಿದ್ದು ಮುಂಜಾಗ್ರತಾ ಕ್ರಮವಾಗಿ ಕ್ಷಿಪ್ರ ಕಾರ್ಯಾಚರಣೆ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಅರೆಸೇನಾಪಡೆ ಸಿಬ್ಬಂದಿಗಳ ಗಸ್ತು ಆರಂಭಿಸಲಾಗಿದೆ. ಆಯಾ ಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com