ಕುಂದಾಪುರ: ಇಲ್ಲಿಗೆ ಸಮೀಪದ ಬಸ್ರೂರು ಮೂರುಕೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು 1 ತಾಸು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಕೋಟೇಶ್ವರದಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಬೀಡಿ ಚೀಲ ಹೊಂದಿದ್ದ ಬೈಕ್ ಹಾಗೂ ಕುಂದಾಪುರದಿಂದ ಶಂಕರನಾರಾಯಣ ಕಡೆಗೆ ಸಾಗುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಬೈಕ್ ಹೆದ್ದಾರಿಯಲ್ಲಿ ಮಗುಚಿತು.
ಇದೇ ಸಂದರ್ಭದಲ್ಲಿ ಉಡುಪಿಯಿಂದ ಕುಂದಾಪುರದ ಕಡೆಗೆ ಆಗಮಿಸಿದ ಲಾರಿ ಅಪಘಾತದಿಂದ ಹೆದ್ದಾರಿಯಲ್ಲಿ ಬಿದ್ದಿದ್ದ ಬೀಡಿ ಚೀಲ ಹೊಂದಿದ್ದ ಬೈಕ್ ಮೇಲೆ ಏರಿದೆ. ಬೈಕ್ ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯೆ ಡಾ.ಶ್ರೀದೇವಿ ಕಟ್ಟೆ ತಮ್ಮ ಕಾರನ್ನು ಬದಿಗೆ ಸರಿಸುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ಓವರ್ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ.
ಬೆನ್ನು ಬೆನ್ನಿಗೆ ಡಿಕ್ಕಿ ಸಂಭವಿಸಿದ್ದರಿಂದ ಹೆದ್ದಾರಿ ಸ್ತಬ್ಧಗೊಂಡಿತು. 1 ತಾಸು ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಅವಘಡಕ್ಕೀಡಾದ ವಾಹನ ಬದಿಗೆ ಸರಿಸಿದರು. ಘಟನೆಯಲ್ಲಿ ಬೈಕ್ ಸವಾರರಾದ ಶಂಕರನಾರಾಯಣ ಮಂಜುನಾಥ ಆಚಾರ್ಯ(58) ಹಾಗೂ ಮೂಡುಗೋಪಾಡಿಯ ಲತೀಫ್(40) ಗಾಯಗೊಂಡಿದ್ದಾರೆ. ಎರಡು ಬೈಕ್, ಲಾರಿ, ಕಾರು, ಬಸ್ ಜಖಂಗೊಂಡಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.