ಬೆಂಕಿ ಅವಘಡ: ಎರಡು ಅಂಗಡಿಗೆ ಹಾನಿ

ಮರವಂತೆ: ಇಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದ ಎರಡು ಅಂಗಡಿಗಳಿಗೆ ಸೋಮವಾರ ರಾತ್ರಿ ಬೆಂಕಿ ತಗಲಿ ಸುಮಾರು 2 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ. ಮಹಾಲಿಂಗ ದೇವಾಡಿಗ ಎಂಬವರ ದಿನಸಿ ಅಂಗಡಿ ಮತ್ತು ನಾಗಪ್ಪಯ್ಯ ಆಚಾರ್ ಅವರ ಟೈಲರಿಂಗ್ ಶಾಪ್‌ನಲ್ಲಿ ಈ ಆಕಸ್ಮಿಕ ಸಂಭವಿಸಿದೆ.

ದಿನಸಿ ಅಂಗಡಿಯಲ್ಲಿ ಅಕ ಹಾನಿಯಾಗಿದ್ದು, ಎಲ್ಲ ದಿನಸಿ ಸಾಮಗ್ರಿಗಳ ಜತೆಗೆ ಫ್ರಿಜ್, ಮರದ ಶೆಲ್, ಶೋಕೇಸ್, ಸಂಪೂರ್ಣ ಭಸ್ಮವಾಗಿದೆ. ಮಾಡಿನ ಸಿಮೆಂಟ್ ಶೀಟ್ ಒಡೆದಿವೆ. ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗಾರೆ ಕಳಚಿ ಬಿದ್ದಿದೆ. ಅಂಗಡಿಯಲ್ಲಿ ಇದ್ದ ರೂ. 30 ಸಾವಿರದ ಜತೆಗೆ ಹಲವು ದಾಖಲೆಗಳು ಸುಟ್ಟು ಹೋಗಿವೆ ಎಂದು ದೇವಾಡಿಗ ತಿಳಿಸಿದ್ದಾರೆ. 

ಪಕ್ಕದ ಟೈಲರಿಂಗ್ ಶಾಪ್‌ನಲ್ಲಿಯೂ ಬೆಂಕಿ ಹಾವಳಿ ನಡೆಸಿದೆ. ಟೈಲರಿಂಗ್ ಮಶೀನ್, ಅದರ ಮೋಟರ್, ಓವರ್ ಲಾಕ್ ಮಶೀನ್, ಇಸ್ತ್ರಿ ಪೆಟ್ಟಿಗೆ, ಮರದ ರ‌್ಯಾಕ್, ಟೇಬಲ್, ಕುರ್ಚಿ, ಗ್ರಾಹಕರು ಹೊಲಿಯಲು ನೀಡಿದ್ದ ಬಟ್ಟೆಗಳು ಸುಟ್ಟು ಹೋಗಿವೆ. ತಮಗಾಗಿರುವ ನಷ್ಟ ರೂ 80 ಸಾವಿರ ಎಂದು ಆಚಾರ್ ಹೇಳಿದರು. 

ಬೆಂಕಿ ಆಕಸ್ಮಿಕಕ್ಕೆ ದಿನಸಿ ಅಂಗಡಿಯಲ್ಲಿ ಆದ ವಿದ್ಯುತ್ ಶಾರ್ಟ್ ಸರ್ಕೀಟ್ ಕಾರಣವೆನ್ನಲಾಗುತ್ತಿದೆ. ಮಧ್ಯ ರಾತ್ರಿಯ ಬಳಿಕ ಶೀಟ್‌ಗಳ ಸೋಟದ ಸದ್ದಿನಿಂದ ಎಚ್ಚತ್ತ ಸಮೀಪದ ಮನೆಯವರು, ಸಮೀಪದ ನಿವಾಸಿ, ದಿನಸಿ ಅಂಗಡಿ ಮಾಲೀಕರನ್ನು ಎಚ್ಚರಿಸಿದರು. ಜನ ಸೇರಿ ಬೆಂಕಿ ನಂದಿಸುವಷ್ಟರಲ್ಲಿ ಎಲ್ಲವನ್ನು ಬೆಂಕಿ ಆಹುತಿ ತೆಗೆದುಕೊಂಡಿತ್ತು. ತೀವ್ರವಾಗಿ ಹಾನಿಗೊಂಡಿರುವ ಎರಡೂ ಅಂಗಡಿಗಳ ಬಳಕೆ ಅಸಾಧ್ಯವಾಗಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com