ಪಡುಕೋಣೆ: ಪಡುಕೋಣೆ ಸಮೀಪ ಸೌಪರ್ಣಿಕಾ ನದಿಯಲ್ಲಿ ಗೆಳೆಯರೊಂದಿಗೆ ಈಜಲು ಹೋದ ನಾಡಾ ನಿವಾಸಿ ಅಕ್ಷಯ ಪೂಜಾರಿ(20) ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ತಂದೆ-ತಾಯಿ ಮೃತರಾಗಿದ್ದರಿಂದ ನಾಡಾ-ಗುಡ್ಡೆಅಂಗಡಿಯ ಜನತಾ ಕಾಲನಿಯಲ್ಲಿ ತನ್ನ ಅಜ್ಜ-ಅಜ್ಜಿಯೊಂದಿಗೆ ವಾಸವಾಗಿದ್ದ ಅಕ್ಷಯ ಪೂಜಾರಿ ಅವರು ಇಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿದ್ದರು. ಇನ್ನಿತರ ಕೆಲಸಗಾರರೊಂದಿಗೆ ಪ್ರತಿದಿನ ಮಧ್ಯಾಹ್ನ ಹೊಳೆಯಲ್ಲಿ ಸ್ನಾನಕ್ಕಾಗಿ ಪಡುಕೋಣೆಯ ಮಹಾವಿಷ್ಣು ದೇವಸ್ಥಾನದ ಬಳಿ ಹೆಬ್ಟಾರ್ಸಾಲ್ ಎಂಬಲ್ಲಿಗೆ ಹೋಗುವ ಪರಿಪಾಠವನ್ನಿಟ್ಟುಕೊಂಡಿದ್ದರು. ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಹೋಗಲಿದ್ದ ಅಕ್ಷಯ ಪೂಜಾರಿ ಅವರು ಸ್ನೇಹಿತರೊಂದಿಗೆ ಹೊಳೆಯಲ್ಲಿ ಈಜುತ್ತಾ ಸ್ನಾನ ಮಾಡುತ್ತಿದ್ದಾಗ ಅರಿಯದೇ ನೀರಿನ ಆಳಕ್ಕೆ ತೆರಳಿದ್ದು, ಆಕಸ್ಮಿಕವಾಗಿ ಮುಳುಗಿದ್ದಾರೆ. ತಾವು ಬಚಾವ್ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಅವರ ಸ್ನೇಹಿತರು ಪೋಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.