ಗಂಗೊಳ್ಳಿ: ಶುಕ್ರವಾರ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಜಲವಾಹಿನಿ ಹೆಸರಿನ ಮೀನುಗಾರಿಕಾ ದೋಣಿ ಮೀನುಗಾರಿಕೆ ಮುಗಿಸಿ ಮಧ್ಯಾಹ್ನ ಸುಮಾರು 2 ಗಂಟೆಗೆ ಗಂಗೊಳ್ಳಿ ಬಂದರಿಗೆ ವಾಪಾಸಾಗುತ್ತಿದ್ದ ವೇಳೆ ಗಂಗೊಳ್ಳಿಯ ಅಳಿವೆ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಏಳು ಮಂದಿ ಮೀನುಗಾರರನ್ನು ಅಪಾಯದಿಂದ ರಕ್ಷಿಸಲಾಗಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
ಇದೇ ಸಂದರ್ಭ ಮೀನುಗಾರಿಕೆ ಮುಗಿಸಿ ವಾಪಾಸು ಬರುತ್ತಿದ್ದ ಶಿವಕೃಪಾ ದೋಣಿಯಲ್ಲಿದ್ದ ಮೀನುಗಾರರು ಅಪಘಾತಕ್ಕೀಡಾದ ದೋಣಿಯಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ಬೋಟಿನ ಮಾಲಕರಾದ ಗಣಾ„ ಆನಂದ ಖಾರ್ವಿ, ಚೊಂದೆ ಕೃಷ್ಣ ಖಾರ್ವಿ ಹಾಗೂ ಜಟಾ„ ಶೀನ ಖಾರ್ವಿ ಮತ್ತು ಮೀನುಗಾರರಾದ ಸುನೀಲ ಖಾರ್ವಿ, ರಾಘವೇಂದ್ರ ಖಾರ್ವಿ, ಪೊಕ್ಕೆ ಅಚ್ಯುತ ಖಾರ್ವಿ ಹಾಗೂ ಸುರೇಶ ಖಾರ್ವಿ ಎಂಬುವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ದೋಣಿಯಲ್ಲಿದ್ದ ಸುಮಾರು 110 ಬುಟ್ಟಿ ಮೀನು ಸಮುದ್ರ ಪಾಲಾಗಿದ್ದು, ದೋಣಿಯಲ್ಲಿದ್ದ ಬಲೆ ಹಾಗೂ ಇಂಜಿನ್ಗೆ ಹಾನಿಯಾಗಿದೆ. ಅವಘಡದಿಂದ ದೋಣಿ ಜಖಂಗೊಂಡಿದ್ದು, ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.