ಉಡುಪಿ: ಕುಖ್ಯಾತ ರೌಡಿ ಪಿಟ್ಟಿ ನಾಗೇಶ್ (38) ಎಂಬಾತನನ್ನು ತಲವಾರಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ರಾ. ಹೆ. 66ರ ಉದ್ಯಾವರದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಕಟಪಾಡಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಫೋರ್ಡ್ ಫಿಯೆಸ್ಟಾ (ಕೆ.ಎ.20.ಬಿ.6757) ಕಾರನ್ನು ಉದ್ಯಾವರದಲ್ಲಿ ತಡೆಗಟ್ಟಿದ ದುಷ್ಕರ್ಮಿಗಳು ರೌಡಿ ಪಿಟ್ಟಿಯನ್ನು ಕಾರಿನಿಂದ ಹೊರಗೆಳೆದು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ ಸುಮಾರು 7.30ರ ವೇಳೆಗೆ ಈ ಘಟನೆ ಸಂಭವಿಸಿದ್ದು, ಮೃತ ಪಿಟ್ಟಿ ಸಂಚರಿಸುತ್ತಿದ್ದ ಫೋರ್ಡ್ ಫಿಯೆಸ್ಟಾ ಕಾರನ್ನು ಮತ್ತೂಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ತಂಡ ಹತ್ಯೆ ನಡೆಸಿ, ಪರಾರಿಯಾಗಿರಬೇಕೆಂದು ಸಂಶಯಿಸಲಾಗಿದೆ. ಮೃತ ದೇಹದಲ್ಲಿ ಹತ್ತಾರು ಕಡೆ ತಲವಾರಿನಿಂದ ಕೊಚ್ಚಿದ ಗಾಯಗಳಾಗಿದ್ದು, ಒಂದು ಚೂರಿಯೂ ದೊರಕಿದೆ.
ರಾ. ಹೆ. 66ರಲ್ಲಿ ಸಂಚರಿಸುತ್ತಿದ್ದ ರೀತಿಯಲ್ಲಿದ್ದ ಕಾರು ಉದ್ಯಾವರ ಪೆಟ್ರೋಲ್ ಪಂಪ್ಗಿಂತ ಸ್ವಲ್ಪ ದೂರದಲ್ಲಿ ಹೆದ್ದಾರಿಯಿಂದ ಅರ್ಧ ಭಾಗ ಕೆಳಕ್ಕೆ ಇಳಿದಿದ್ದು, ಅಲ್ಲೇ ಮುಂಭಾಗದ ಕೆಸರಿನ ಹೊಂಡದಲ್ಲಿ ಮೃತದೇಹ ಬಿದ್ದುಕೊಂಡಿತ್ತು.
ಮೃತದೇಹ ಕೆಸರಿನಲ್ಲಿ ಮುಳುಗಿ ಹೋಗಿದ್ದರಿಂದ ಹಾಗೂ ತಲೆ ಮತ್ತು ದೇಹದ ಹಲವೆಡೆಗಳಲ್ಲಿ ತಲವಾರಿನಿಂದ ಕಡಿದ ಗಾಯಗಳಿದ್ದುದರಿಂದ ತಕ್ಷಣಕ್ಕೆ ಕೊಲೆಯಾದವ ಯಾರು ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಪರದಾಡುವಂತಾಯಿತು.
ಸುದ್ದಿಮೂಲ: ಉದಯವಾಣಿ