ಸಾಮೂಹಿಕ ಆತ್ಮಹತ್ಯೆ: ಸತ್ತ ಮೇಲು ಒಂದಾಗೊಲ್ಲ ಎಂದ ದಂಪತಿ

ಕಾರ್ಕಳ: ಮದುವೆಯ ಸಂದರ್ಭ ನೂರಾರು ಕಾಲ ಜತೆಯಾಗಿ ಬಾಳಿ ಎಂದು ನೆರೆದವರು ಆಶೀರ್ವದಿಸುತ್ತಾರೆ. ಈ ವಿಚಾರದಲ್ಲಿ ಕಾರ್ಕಳ ತಾಲೂಕಿನ ಮುಡಾರು ಮುಡ್ರಾಲು ಗರಡಿಗುಡ್ಡೆಯ ಬಳಿ ಆ.25ರಂದು ಸಾಮೂಹಿಕ ಆತ್ಮಹತ್ಯೆಗೆ ಶರಣಾದ ದಂಪತಿಯ ಕಥೆ ತೀರಾ ಸಂಕೀರ್ಣ. ಮದುವೆಯಾಗಿ ಹೆಚ್ಚು ಕಾಲ ಬಾಳುವೆ ನಡೆಸಲಿಲ್ಲ. ಒಂದೇ ಬಾವಿಯಲ್ಲಿ ಕುಟುಂಬದ ಸದಸ್ಯರೆಲ್ಲರ ಶವ ಕಂಡರೂ ಮನೆಯಲ್ಲಿ ಪತ್ತೆಯಾದ ಚೀಟಿಯೊಂದು ಇವರು ಒಂದಾಗಿರಲಿಲ್ಲ ಎಂಬ ದಾರುಣ ಕತೆಯನ್ನು ಹೇಳಿತು. 

ಡೆತ್ ನೋಟ್ ಎಷ್ಟು ನಿಷ್ಠುರವಾಗಿತ್ತು ಎಂದರೆ 'ನಾವು ಸತ್ತರೂ ಒಂದಾಗೊಲ್ಲ. ನಮ್ಮೆಲ್ಲರ ಶವವನ್ನು ತವರಿಗೆ ಕಳುಹಿಸಿ' ಎಂದಿತ್ತು. ಗಂಡ ಹೆಂಡತಿ ಒಂದಾಗಿ ಬಾವಿಗೆ ಹಾರಿದ್ದಲ್ಲ ಎಂಬುದು ಇದರಿಂದ ತಿಳಿಯಿತು. ಅಂದು ಸಾಮೂಹಿಕ ಆತ್ಮಹತ್ಯೆಗೆ ಶರಣಾದವರು ಜಯ ಮಡಿವಾಳ (42), ಆತನ ಪತ್ನಿ ಗುಲಾಬಿ (32), ಮಕ್ಕಳಾದ ಹರ್ಷಿತ್(5) ಹಾಗೂ ಒಂದೂವರೆ ವರ್ಷದ ಮನ್ವಿತಾ. 

ಕಟ್ಟಿಗೆ ಕೆಲಸವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದ ಜಯ ಮಡಿವಾಳ 2006ರಲ್ಲಿ ಉಪ್ಪಿನಂಗಡಿ ನಿವಾಸಿ ಗುಲಾಬಿಯನ್ನು ವಿವಾಹವಾಗಿದ್ದ. ಗುಲಾಬಿ ಕೂಡ ಕೂಲಿ ಕೆಲಸ ಮಾಡುತ್ತಿದ್ದರು. ದಂಪತಿಯ ದುಡಿಮೆಯಿಂದ ಹೇಳುವಷ್ಟು ಆರ್ಥಿಕ ಸಂಕಷ್ಟ ಆ ಮನೆಯಲ್ಲಿರಲಿಲ್ಲ. ಆದರೆ ಜಯ ಮಡಿವಾಳ ಕುಡಿತದ ಚಟ ಹೊಂದಿದ್ದ. ಪ್ರತೀದಿನ ರಾತ್ರಿ ಇವರಿಬ್ಬರ ನಡುವೆ ಜಗಳವಾದರೆ ಮುಂಜಾನೆ ಎದ್ದಾಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದ್ದರು. ಈ ನಡುವೆ ಅನೇಕ ಬಾರಿ ಇವರಿಬ್ಬರ ನಡುವೆ ಏರ್ಪಾಟ್ಟ ಕಲಹದಿಂದಾಗಿ ಗುಲಾಬಿ ಆಗಾಗ ಪತಿಯ ಮನೆಬಿಟ್ಟು ತವರು ಸೇರುತ್ತಿದ್ದಳು. ಹತ್ತು-ಹದಿನೈದು ದಿನ ಕಳೆದ ಬಳಿಕ ಮತ್ತೆ ಪತಿಯ ಮನೆಗಾಗಮಿಸುತ್ತಿದ್ದಳು. ಇದು ನಿರಂತರವಾಗಿ ನಡೆಯುತ್ತಲೇ ಇತ್ತು. ಸಾಯುವ ಹತ್ತು ದಿನದ ಹಿಂದೆಯೂ ಇಂತಹುದೇ ಘಟನೆ ಮರುಕಳಿಸಿತ್ತು. ತವರು ಮನೆಯಲ್ಲಿದ್ದ ಗುಲಾಬಿ ತನ್ನ ಮಕ್ಕಳ ಜತೆ ಮತ್ತೆ ಮುಡಾರಿಗೆ ಆಗಮಿಸಿದ್ದಳು. 

ರಾತ್ರಿಯ ವೇಳೆ ಜಯ ಮಡಿವಾಳ ವಿಪರೀತ ಕುಡಿದು ಪತ್ನಿ ಜತೆ ಜಗಳ ಕಾದಿದ್ದ. ಅಷ್ಟಕ್ಕೆ ಸುಮ್ಮನಿರದೆ ತನ್ನ ಒಂದೂವರೆ ವರ್ಷದ ಮಗಳು ಮನ್ವಿತಾಳನ್ನು ಮನೆಯಿಂದ ಹೊರಗೆ ಅಂಗಳಕ್ಕೆ ಎಸೆದಿದ್ದ. ಅದನ್ನು ಕಂಡ ಗುಲಾಬಿ ಕಂಗಲಾಗಿದ್ದಳು. ಹೆತ್ತ ಕರುಳಿಗೆ ಅತೀವ ನೋವಾಗಿತ್ತು. ಆತ್ಮಹತ್ಯೆಗೆ ಆಗಲೇ ತೀರ್ಮಾನಿಸಿರಬಹುವುದು. ಆದರೆ ರಾತ್ರಿಯ ವೇಳೆ ಐದು ವರ್ಷ ಹರೆಯದ ತನ್ನ ಮಗ ಹರ್ಷಿತ್ ಮನೆಯಲ್ಲಿರಲಿಲ್ಲ. ಆತ ದೂರದ ಸಂಬಂಧಿಕರ ಮನೆಗೆ ಹೋಗಿದ್ದ. ಆತನ ಬರುವಿಕೆಯನ್ನು ಕಾದು ಕುಳಿತ ಗುಲಾಬಿ ಆ.25ರಂದು ಮುಂಜಾನೆ ಮನೆಗಾಗಮಿಸಿದ ಹರ್ಷಿತ್‌ನನ್ನು ಜತೆಗೆ ಕರೆದುಕೊಂಡು, ಪುಟ್ಟ ಮಗುವನ್ನೂ ಎತ್ತಿಕೊಂಡು ಸಮೀಪದ ಪಾಳು ಬಾವಿಗೆ ಹಾರಿದ್ದಳು. 

ಮಧ್ಯಾಹ್ನದ ವೇಳೆ ಜಯ ಮಡಿವಾಳ ಮನೆಗೆ ಹಿಂದುರುಗಿ ಬಂದಾಗ ಮಡದಿ ಮಕ್ಕಳಿರಲಿಲ್ಲ. ಹುಡು ಕಾಡಲಾರಂಭಿಸಿದ. ಆಗ ಹತ್ತಿರವೇ ಇದ್ದ ಬಾವಿಯಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ನೆರೆಮನೆಯ ಯುವಕ ಹೇಳಿದ್ದ. ಪರಿಣಾಮ ಗಾಬರಿಯಾದ ಜಯ ಮಡಿವಾಳ ಕೂಡಾ ಅದೇ ಬಾವಿಗೆ ಹಾರಿ ತಾನು ಶವವಾದ.
ವಿಲಾಸ್ ಕುಮಾರ್ ನಿಟ್ಟೆ , ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com