ಕುಂದಾಪುರ: ಕೋಣಿ ಗ್ರಾ.ಪಂ. ವ್ಯಾಪ್ತಿಯ ಮೂರೂರು ದೇವಸ್ಥಾನ ರಸ್ತೆಯ ಬಳಿಯ ಬೆನಕ ನಿಲಯದ ನಿವಾಸಿ ಮಾಧವ (33) ಆ.3ರಂದು ರಾತ್ರಿ ತಮ್ಮ ಮನೆಯ ಕೊಠಡಿಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ಸಮಯದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಸಿದ್ದರೂ, ಅದು ಫಲಕಾರಿಯಾಗದೆ ಇರುವುದರಿಂದ ಜೀವನದಲ್ಲಿ ಬೇಸತ್ತು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಸಹೋದರ ಬಾಬು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಮಾಧವ ಗೃಹರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಉತ್ತಮ ಗಾಯಕ ಹಾಗೂ ಹವ್ಯಾಸಿ ಚಿತ್ರಕಾರರಾಗಿದ್ದರು.
ಗೃಹರಕ್ಷಕ ದಳದ ಉಡುಪಿ ಜಿಲ್ಲಾ ಕಮಾಂಡೆಂಟ್ ಡಾ| ಪ್ರಶಾಂತ ಶೆಟ್ಟಿ ಹಾಗೂ ಜಿಲ್ಲಾ ಸೆಕೆಂಡ್ ಇನ್ ಕಮಾಂಡೆಂಟ್ ರಾಜೇಶ್ ಕೆ.ಸಿ. ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.