ಹೆಮ್ಮಾಡಿ-ಕುಂದಾಪುರ-ಕೋಟೇಶ್ವದಲ್ಲಿ ಸರಣಿ ಕಳ್ಳತನ

ಕುಂದಾಪುರ: ತಾಲೂಕಿನ ಹೆಮ್ಮಾಡಿಯಿಂದ ಕೋಟೇಶ್ವರದ ತನಕ ಸೋಮವಾರ ರಾತ್ರಿ ಅಂಗಡಿಗಳ ಸರಣಿ ಕಳ್ಳತನದ ಘಟನೆ ನಡೆದಿದ್ದು, ಕೆಲವಡೆ ಕಳವು ವಿಫಲ ಯತ್ನ ನಡೆಸಿದ್ದರೆ, ಇನ್ನು ಕೆಲವಡೆ ಸಿಕ್ಕಿದ್ದನ್ನು ದೋಚಿಕೊಂಡು ಹೋಗಿದ್ದಾರೆ.

ಮಂಗಳವಾರ ಬೆಳಗ್ಗಿನ ಜಾವ ಈ ಘಟನೆ ಸಂಭವಿಸಿರಬೇಕು ಎಂದು ಅಂದಾಜಿಸಲಾಗಿದೆ. ಹೆಮ್ಮಾಡಿಯಿಂದ ಕೋಟೇಶ್ವರದ ತನಕ ಒಂದೇ ಗುಂಪು ಈ ಕಳ್ಳತನದ ಚಟುವಟಿಕೆಯಲ್ಲಿ ಪಾಲ್ಗೊಂಡಿರಬೇಕು ಎಂದು ಶಂಕೆ ವ್ಯಕ್ತವಾಗಿದೆ. ಮಗಳವಾರ ರಾತ್ರಿ ಮಳೆ ಸುರಿಯುತ್ತಿರುವುದರಿಂದ ಈ ಕಳ್ಳತನಕ್ಕೆ ಸಹಕಾರಿಯಾಗಿದೆ ಎನ್ನಲಾಗಿದೆ.

ಕುಂದಾಪುರದ ಕಾಲೇಜು ರಸ್ತೆಯಲ್ಲಿರುವ ಸೀತಾರಾಮ ವಿವಿದೋದ್ಧೇಶ ಸಹಕಾರಿ ಸಂಘದ ಶಟರ್‌ ಒಡೆದು ಒಳ ನುಗ್ಗಿದ ಕಳ್ಳರು ಸೇಫ್‌ ಲಾಕರ್‌ನ್ನು ಒಡೆಯುವ ಯತ್ನದಲ್ಲಿ ವಿಫಲತೆಯನ್ನು ಕಂಡಿದ್ದಾರೆ. ಅಲ್ಲಿಯೇ ಇದ್ದ ತೂಕದ ತಕ್ಕಡಿಯನ್ನು ಕೊಂಡೊಯ್ದಿದ್ದಾರೆ.

ಕೋಟೇಶ್ವರದಲ್ಲಿ ಬಹುತೇಕ ಚಿನ್ನದ ಅಂಗಡಿಗಳನ್ನು ಟಾರ್ಗೆಟ್‌ ಮಾಡಿಕೊಂಡ ಕಳ್ಳರು ಹೆಮ್ಮಾಡಿ ಹಾಗೂ ಕೋಟೇಶ್ವರದಲ್ಲಿ ಸರಣಿಯಾಗಿ ಚಿನ್ನದಂಗಡಿಯ ಕಳವು ನಡೆಸಲು ಯತ್ನಿಸಿದ್ದಾರೆ. ಅಲ್ಲದೇ ಕುಂದಾಪುರದಲ್ಲಿ ಸಹಕಾರಿ ಸಂಘವೊಂದರ ಶಟರ್‌ ಮುರಿದು ಕಳವಿನ ಯತ್ನ ನಡೆಸಿದ್ದಾರೆ. ಕೋಟೇಶ್ವರ ರಥ ಬೀದಿಯಲ್ಲಿರುವ ಪ್ರಕಾಶ್‌ ಜ್ಯುವೆಲ್ಲರ್ನ , ಕೀರ್ತಿ ಜ್ಯುವೆಲ್ಲರ್, ವೀಣಾ ಜುವೆಲ್ಲರ್ , ಪ್ರಸಿದ್ಧಿ ಜ್ಯುವೆಲ್ಲರ್ನ ಶಟರ್‌ ಒಡೆದು ಬೆಳ್ಳಿಯ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಲಾಯಿತು. ಕುಂದಾಪುರ ಡಿವೈಎಸ್‌ಪಿ ಸಿ.ಬಿ.ಪಾಟೀಲ್‌, ವೃತ್ತ ನಿರೀಕ್ಷಕ ಸಿ.ಪಿ.ದಿವಾಕರ್‌, ಠಾಣಾಧಿಕಾರಿ ನಾಸಿರ್‌ ಹುಸೇನ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಮ್ಮಾಡಿ ಪೇಟೆ ಪರಿಸರದಲ್ಲಿ ಮಂಗಳವಾರ ಮುಸುಕಿನಲ್ಲಿ ಸರಣಿ ಕಳವು ಪ್ರಕರಣ ನಡೆದಿದ್ದು, ಇಲ್ಲಿನ ಕೊಲ್ಲೂರು ರಸ್ತೆ ಮಗ್ಗುಲಿನಲ್ಲಿರುವ ವೈನ್‌ಶಾಪ್‌ ಮತ್ತು ಹಾರ್ಡ್‌ವೇರ್‌ ಅಂಗಡಿಗಳ ಶೆಟರ್‌ ಒಡೆದು ಒಳಪ್ರವೇಶಿಸಿದ ಕಳ್ಳರು ಪುಡಿಗಾಸು ಹಾಗೂ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಹೆಮ್ಮಾಡಿ ದೇವಸ್ಥಾನ ರಸ್ತೆಯಲ್ಲಿರುವ ಚಿನ್ನದ ಅಂಗಡಿ ಶೆಟರ್‌ ಒಡೆದು ಕಳವಿಗೆ ಯತ್ನ ನಡೆಸಿರುವುದು ಕಂಡುಬಂದಿದೆ.

ತಿಮ್ಮಪ್ಪ ಪೂಜಾರಿ ಎಂಬವರ ಮಾಲಕತ್ವದ ವೈನ್‌ಶಾಪ್‌ನಲ್ಲಿ 1500 ರೂ. ನಗದು ಹಾಗೂ ರೂ. 8500 ಮೊತ್ತದ 12 ಬಾಟಲಿ ಮದ್ಯವನ್ನು ಕದ್ದೊಯ್ದ ಕಳ್ಳರು ಪಕ್ಕದಲ್ಲಿರುವ ಲೂಯಿಸ್‌ ಹಾರ್ಡ್‌ವೇರ್‌ ಅಂಗಡಿಯಿಂದ 25 ಲೀಟರ್‌ ಪೈಂಟ್‌ ಡಬ್ಬಿಯನ್ನು ಎಗರಿಸಿದ್ದಾರೆ. ದೇವಸ್ಥಾನ ರಸ್ತೆ ಪಕ್ಕದ ಮಾತƒಶ್ರೀ ಜ್ಯುವೆಲ್ಲರಿ ಅಂಗಡಿಯ ಶೆಟರ್‌ ಮುರಿದು ಒಳಪ್ರವೇಶಿಸುವ ಪ್ರಯತ್ನ ನಡೆಸಿದ್ದಾರೆ.

ಪೊಲೀಸ್‌ ಮಾಹಿತಿಯ ಪ್ರಕಾರ ಎಲ್ಲಾ ಅಂಗಡಿಗಳ ಶಟರ್‌ಗಳನ್ನು ಒಂದೇ ತೆರನಾಗಿ ಒಡೆಯಲಾಗಿದ್ದು ಇದೊಂದು ಕಳವಿನಲ್ಲಿ ಪರಿಣಿತರಾದವರ ಕೃತ್ಯ ಎನ್ನಲಾಗಿದೆ. ಅಲ್ಲದೇ ಕೋಟೇಶ್ವರದ ಯಾವುದೇ ಚಿನ್ನದಂಗಡಿಯಲ್ಲಿ ಸಿ.ಸಿ.ಟಿವಿ ಅಳವಡಿಸದೇ ಇರುವುದರಿಂದ ಕಳ್ಳರ ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ.

ಹೆಚ್ಚುತ್ತಿರುವ ಸರಣಿ ಕಳವು: ಕಳೆದ ವಾರ ಬೈಂದೂರು ಪರಿಸಿದರದಲ್ಲಿ ಕಳವು ನಡೆದ ಘಟನೆ ಮರೆಯಾಗುತ್ತಿರುವಂತೆ ಕುಂದಾಪುರ ಪರಿಸರದಲ್ಲಿ ಸರಣಿ ಕಳವು ನಡೆದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com