ಕಾಣೆಯಾದ ವಿದ್ಯಾರ್ಥಿನಿ ಶವವಾಗಿ ಪತ್ತೆ. ಅತ್ಯಾಚಾರ ಕೊಲೆ ಶಂಕೆ

ಬೈಂದೂರು: ಮೂರು ದಿನದ ಹಿಂದೆ ನಾಪತ್ತೆಯಾದ ಶಿರೂರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರತ್ನಾ ಕೊಠಾರಿ (17) ಶನಿವಾರ ಶವವಾಗಿ ಪತ್ತೆಯಾಗಿದ್ದು ಅತ್ಯಾಚಾರವೆಸಗಿ ಹತ್ಯೆನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಶನಿವಾರ ಬೆಳಗ್ಗೆ ಶಿರೂರು ಆಲಂದೂರಿನ ಸಾವಂತಗುಡ್ಡೆ ಎಂಬ ನಿರ್ಜನ ಅರಣ್ಯ ಪ್ರದೇಶದಲ್ಲಿ ರತ್ನಾ ಶವ ಪತ್ತೆಯಾಗಿದೆ. ಯಡ್ತರೆ ಗ್ರಾಮದ ಆಲಂದೂರು ಕೋಣನಮಕ್ಕಿ ನಿವಾಸಿ ಶಂಕರ ಕೊಠಾರಿ ಎಂಬವರ ಪುತ್ರಿಯಾದ ಈಕೆ ಜು.9ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುವಾಗ ನಾಪತ್ತೆಯಾಗಿದ್ದಳು. 

ಅತ್ಯಾಚಾರ ಶಂಕೆ: ವಿದ್ಯಾರ್ಥಿನಿ ರತ್ನಾ ಕಿವಿಯ ಓಲೆ ಧರಿಸುತ್ತಿದ್ದಳು. ಮತದೇಹದಲ್ಲಿ ಕಿವಿಯ ಓಲೆ ಇದ್ದಿರಲಿಲ್ಲ. ಈಕೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆ ಎರಡು ಬಾರಿ ಮನೆಕಳ್ಳತನ ಪ್ರಕರಣ ಹಾಗೂ ಮಹಿಳೆಯೊಬ್ಬಳ ಸರ ಅಪಹರಣ ಪ್ರಕರಣ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಬೈಂದೂರಿನ ರತ್ನ ಕೊಠಾರಿ ಸಾವು ಹೇಗಾಗಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ, ಅತ್ಯಾಚಾರ ನಡೆದಿರಬಹುದಾದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ. ಬಿ. ಬೋರಲಿಂಗಯ್ಯ ತಿಳಿಸಿದ್ದಾರೆ. 

ವಿಸ್ತೃತ ವರದಿ 2, 3 ದಿನಗಳಲ್ಲಿ ಬರಲಿದ್ದು ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಸ್ಥಳ ಪರಿಶೀಲನೆ ಸಂದರ್ಭ ಹಾಗೂ ಮೃತಳ ಮೈಮೇಲಿದ್ದ ಬಟ್ಟೆ ಮತ್ತು ಶರೀರದಲ್ಲಿ ಯಾವುದೇ ಗಾಯಗಳಿಲ್ಲದ ಹಿನ್ನೆಲೆಯಲ್ಲಿ ಅತ್ಯಾಚಾರ ನಡೆದ ಸಾಧ್ಯತೆಯಿಲ್ಲ . ಮೇಲ್ನೋಟಕ್ಕೆ ಅತ್ಯಾಚಾರವೆಸಗಿ ಕೊಲೆಗೈದಿರಬಹುದೆಂಬ ಶಂಕೆ ಇದ್ದರೂ ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಸತ್ಯತೆ ಧಡೀಕರಿಸಲಾಗುವುದು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ದುಷ್ಕರ್ಮಿಗಳ ಬಂಧನಕ್ಕೆ ಮೂವರು ಸಿಪಿಐ ನೇತತ್ವದ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ರಾಜು ಪೂಜಾರಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ, ಡಿವೈಎಸ್ಪಿ ಸಿ.ಬಿ.ಪಾಟೀಲ್, ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ ಪರಿಶೀಲನೆ ನಡೆಸಿದೆ. 

ಕಠಿಣ ಕ್ರಮಕ್ಕೆ ಆಗ್ರಹ: ವಿದ್ಯಾರ್ಥಿನಿ ನಾಪತ್ತೆಯಾದ ದಿನದಿಂದಲೇ ತನಿಖೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದೆ. ದುರ್ದೈವಶಾತ್ ವಿದ್ಯಾರ್ಥಿನಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ವಿಶೇಷ ತಂಡ ರಚಿಸಿ ಶೀಘ್ರ ಆರೋಪಿ ಪತ್ತೆಹಚ್ಚಿ, ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣದ ಬಗ್ಗೆ ರಾಜ್ಯ ಗಹ ಸಚಿವರಿಗೆ ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ರಕ್ಷಣೆಯ ಹಿನ್ನೆಲೆಯಲ್ಲಿ ವಿಶೇಷ ಕ್ರಮ ತೆಗೆದುಕೊಳ್ಳುವಂತೆಯೂ ಆಗ್ರಹಿಸಿದ್ದೇನೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ರತ್ನಾ ಅವರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಒತ್ತಾಯಿಸಿದ್ದಾರೆ. 

*ಕಡುಬಡತನದ ನಡುವೆಯೂ ಮಗಳಿಗೆ ಕಾಲೇಜು ಶಿಕ್ಷಣ ನೀಡಬೇಕೆಂದು ಕನಸು ಕಂಡಿದ್ದ ಬಡಕುಟುಂಬಕ್ಕೆ ಇದೊಮದು ಆಘಾತ. ಅಮಾಯಕ ಬಾಲಕಿಯನ್ನು ಹತೈಗೈದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗೊಳಪಡಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು -ಗೋಪಾಲ ಕೊಠಾರಿ ಅಧ್ಯಕ್ಷರು ಉಡುಪಿ ಜಿಲ್ಲಾ ಕೊಠಾರಿ ಸಮಾಜ ಸೇವಾ ಸಂಘ 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com