ಕುಂದಾಪುರ: ಕೋಟೇಶ್ವರ ಒಳಪೇಟೆ ರಸ್ತೆಯಲ್ಲಿ ಲಾರಿಯೊಂದು ಯದ್ವಾತದ್ವಾ ಚಲಿಸಿದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅರ್ಚಕರೊಬ್ಬರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೀಜಾಡಿ ಬೈಪಾಸ್ ಜಂಕ್ಷನ್ನಿಂದ ಕೋಟೇಶ್ವರ ಒಳಪೇಟೆ ಪ್ರವೇಶಿಸಿದ ಲಾರಿ ಮುಖ್ಯರಸ್ತೆಯಲ್ಲಿ ಎರ್ರಾಬಿರ್ರಿ ಸಾಗಿದ್ದು ಕೋಟೇಶ್ವರ ಐಓಬಿ ಬ್ಯಾಂಕ್ ಎದುರುಗಡೆ ತೀರಾ ಎಡಭಾಗಕ್ಕೆ ಚಲಿಸಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಎರಗಿತು. ಕುಂಭಾಸಿ ಹರಿಹರ ದೇವಸ್ಥಾನದ ಅರ್ಚಕ ಶ್ರೀನಿವಾಸ ಭಟ್(60) ಸ್ಥಳದಲ್ಲೇ ಮತಪಟ್ಟರೆ, ಅವರ ಹಿಂದೆ ನಡೆದುಕೊಂಡು ಹೋಗುತ್ತಿದ್ದ ಬೀಜಾಡಿ ಅರಸರಬೆಟ್ಟು ನಿವಾಸಿ ಮಾನಸ(23) ಹಾಗೂ ವಕ್ವಾಡಿ ನಿವಾಸಿ ರವೀಂದ್ರ ಬಾರ್ಕೂರು(35) ಗಾಯಗೊಂಡರು. ಮಾನಸ ಅವರನ್ನು ಮಣಿಪಾಲ ಆಸ್ಪತ್ರೆಗೆ, ರವೀಂದ್ರ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಮುಂದುವರಿದ ಲಾರಿ 5 ವಿದ್ಯುತ್ ಕಂಬ ಮುರಿದುಹಾಕಿದೆ. ಲಾರಿ ಚಾಲಕ ಆಸೀಫ್ ವಿರುದ್ಧ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮದ್ಯಪಾನ ಶಂಕೆ, ಚಾಲಕನಿಗೆ ಥಳಿತ: ಬೀಜಾಡಿಯಲ್ಲಿ ಅಕ್ಕಿ ಅನ್ಲೋಡ್ ಮಾಡಿ ಲೋಡರ್ಸ್ಗಳೊಂದಿಗೆ ಕೋಟೇಶ್ವರ ಒಳಪೇಟೆ ಮುಖ್ಯರಸ್ತೆಗೆ ಆಗಮಿಸಿದ್ದ ಲಾರಿಯ ಚಾಲಕ ಅಮಲು ಪದಾರ್ಥ ಸೇವನೆ ಮಾಡಿದ್ದ ಎನ್ನಲಾಗಿದೆ. ಬೀಜಾಡಿ ಜಂಕ್ಷನ್ನಿಂದಲೇ ಅಪಾಯಕಾರಿ ರೀತಿಯಲ್ಲಿ ಲಾರಿ ಕೊಂಡೊಯ್ಯುತ್ತಿದ್ದ ಎಂದು ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಲಾರಿ ಚಾಲಕನಿಗೆ ಧರ್ಮದೇಟು ನೀಡಿದ್ದಾರೆ.
ಲಾಠಿ ಚಾರ್ಜ್: ಉದ್ರಿಕ್ತ ನಾಗರಿಕರಿಂದಾಗಿ ಪ್ರದೇಶದಲ್ಲಿ ಗೊಂದಲದ ಸ್ಥಿತಿ ನಿರ್ಮಾಣ ಆಗಿದ್ದರಿಂದ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಗುಂಪು ಚದುರಿಸಿದರು. ಕುಂದಾಪುರ ಡಿವೈಎಸ್ಪಿ ಸಿ.ಬಿ.ಪಾಟೀಲ್, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಪಿಎಸ್ಐ ನಾಸೀರ್ ಹುಸೇನ್ ಸ್ಥಳಕ್ಕೆ ತಕ್ಷಣ ಧಾವಿಸಿ ನಾಗರಿಕರನ್ನು ಸಮಾಧಾನಪಡಿಸಲು ಶ್ರಮಿಸಿದರು. ಜನರ ಆಕ್ರೋಶ ತಣ್ಣಗಾಗದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜನೆಗೊಳಿಸಲಾಗಿದೆ.