ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು

ಬೈಂದೂರು: ಆಟವಾಡುತ್ತಿದ್ದ ಬಾಲಕನೋರ್ವ ಮನೆ ಸಮೀಪದ ನೀರು ತುಂಬಿದ್ದ ಹೊಂಡಕ್ಕೆ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಹೇರೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉಳ್ಳೂರಿನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಉಳ್ಳೂರು 11 ನಿವಾಸಿ ರಾಮ ಮತ್ತು ಕುಸುಮ ದಂಪತಿಯ ಪುತ್ರ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದ ಅಭಿಷೇಕ (11) ಮೃತಪಟ್ಟ ಬಾಲಕ.

 ಶಾಲೆಗೆ ರಜೆ ಮಾಡಿದ್ದ ಬಾಲಕ ಮಧ್ಯಾಹ್ನ ಮನೆಯ ಸಮೀಪ ಆಟವಾಡುತ್ತಿದ್ದಾಗ ದುರ್ಘ‌ಟನೆ ಸಂಭವಿಸಿದೆ. ಮನೆಯಿಂದ ಸುಮಾರು ಹತ್ತು ಮೀಟರ್‌ ಅಂತರದಲ್ಲಿ ಇರುವ ಮಳೆನೀರು ತುಂಬಿದ್ದ ಹೊಂಡಕ್ಕೆ ಬಾಲಕ ಕಾಲುಜಾರಿ ಬಿದ್ದಿದ್ದಾನೆ. ಇದನ್ನು ಕಂಡ ಆತನ ಮಾವ ಚಂದ್ರ ಅವರು ನೀರಿಗೆ ಹಾರಿ ಬಾಲಕನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ.

ಮೃತ ಅಭಿಷೇಕ್‌ ತಂದೆ, ತಾಯಿ, ಕಿರಿಯ ಸಹೋದರನನ್ನು ಅಗಲಿದ್ದಾನೆ.

ನೀರಿಗೆ ಧುಮುಕಿದ ತಾಯಿ

ಮಗ ನೀರಿಗೆ ಬಿದ್ದಿರುವ ವಿಷಯ ತಿಳಿದು ಆಘಾತಗೊಂಡ ಆತನ ತಾಯಿ ಕುಸುಮಾ ಅವರೂ ಒಡಿಬಂದು ಹೊಂಡಕ್ಕೆ ಧುಮುಕಿದ್ದಾರೆ. ನೀರಿನಲ್ಲಿ ಮುಳುಗೇಳುತ್ತಿದ್ದ ಕುಸುಮಾ ಅವರನ್ನು ರಕ್ಷಿಸುವಲ್ಲಿ ಚಂದ್ರ ಯಶಸ್ವಿಯಾಗಿದ್ದಾರೆ. ಅವರನ್ನು ತತ್‌ಕ್ಷಣ ಕುಂದಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರು ಚೇತರಿಸಿಕೊಂಡಿದ್ದಾರೆ.

ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com