ಕೋಟೇಶ್ವರ : ಬೀಜಾಡಿಯ ಪ್ರಭು ಹೊಟೆಲ್ ಜಂಕ್ಷನ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಕೋಟ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಮಹಾಬಲೇಶ್ವರ ಭಟ್ (54) ಕೋಟದಿಂದ ಕುಂದಾಪುರ ಕಡೆಗೆ ಕಾರ್ಯನಿಮಿತ್ತ ಆ್ಯಕ್ಟಿವಾ ಹೊಂಡಾ ಸ್ಕೂಟರ್ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿ ನೇರವಾಗಿ ಢಿಕ್ಕಿ ಹೊಡೆಯಿತು. ಪರಿಣಾಮ ಭಟ್ ಲಾರಿಯ ಎದುರಿನ ಟಯರ್ ಭಾಗಕ್ಕೆ ಸಿಕ್ಕಿ ಬಿದ್ದು ತಲೆ ಹಾಗೂ ಕಾಲು, ಮರ್ಮಾಂಗಗಳಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೃತ್ತಿಯಲ್ಲಿ ಪುರೋಹಿತರಾಗಿದ್ದು ಕೋಟ ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮಹಾಬಲೇಶ್ವರ ಭಟ್ ಕುಂದಾಪುರ ಹಾಗೂ ಗಂಗೊಳ್ಳಿ ಖಾರ್ವಿ ಸಮಾಜದ ವಿಶೇಷ ಕಾರ್ಯಕ್ರಮಗಳ ನೇತೃತ್ವ ವಹಿಸುತ್ತಿದ್ದರು. ಓರ್ವ ಪುತ್ರ ಇತ್ತೀಚೆಗಷ್ಟೇ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ತೆರಳಿದ್ದಾರೆ. ಅವರ ಸಾವಿನ ಸುದ್ದಿ ಹರಡುತ್ತಿದ್ದಂñಠೆ ಖಾರ್ವಿ ಸಮಾಜದ ಅನೇಕ ಮುಖಂಡರಲ್ಲದೇ ವಿವಿಧ ಹಿಂದೂ ಸಮಾಜದ ಮುಖಂಡರು ಸರಕಾರಿ ಆಸ್ಪತ್ರೆಗೆ ಭೇಟಿ ಇತ್ತು ಮೃತರ ಅಂತಿಮ ದರ್ಶನ ಪಡೆದರು. ಕುಂದಾಪುರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಮಂದಗತಿಯಿಂದ ಸಾಗುತ್ತಿರುವ ಈ ದಿಸೆಯಲ್ಲಿ ಕುಂಭಾಶಿಯಿಂದ ಕೋಟೇಶ್ವರ ಬೆ„ಪಾಸ್ ತನಕದ ಮುಖ್ಯ ರಸ್ತೆಯಲ್ಲಿ ಅನೇಕ ರಸ್ತೆ ಅಪಘಾತಗಳು ನಡೆಯುತ್ತಿದ್ದು ಈ ಅಪಘಾತಗಳಿಗೆ ಸುಗಮ ವಾಹನ ಸಂಚಾರಕ್ಕೆ ಉಂಟಾಗಿರುವ ರಸ್ತೆ ನಿರ್ಮಾಣದ ಕಾಮಗಾರಿ ಗತಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಏಕಮುಖೀ ವಾಹನ ಸಂಚಾರದ ಹಲವೆಡೆ ವಾಹನ ಚಾಲಕರಿಗೆ ಉಂಟಾಗುತ್ತಿರುವ ಗೊಂದಲವೇ ಇದಕ್ಕೆ ಕಾರಣವಾಗಿದೆ.