ಮಂಗಳೂರು: ನಾಲ್ಕು ವರ್ಷಗಳ ಹಿಂದೆ ಮಹಿಳೆಯೋರ್ವಳ ಶಸ್ತ್ರ ಚಿಕಿತ್ಸೆಗೆ ಉಪಯೋಗಿಸಿದ ಕತ್ತರಿ ಹೊಟ್ಟೆಯಲ್ಲಿ ಬಾಕಿಯಾದ ಘಟನೆ ಈಗ ಬೆಳಕಿಗೆ ಬಂದಿದೆ. ಮಂಗಳೂರು ನರ್ಸಿಂಗ್ ಹೋಮ್ನಲ್ಲಿ 2010ರಲ್ಲಿ ಕೋಟೆಕಾರ್ ಸಮೀಪದ ಮಾಡೂರಿನ ಮಹಿಳೆಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇತ್ತೀಚೆಗೆ ಹೊಟ್ಟೆ ನೋವು ಕಾಣಿಸಿಧಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಕತ್ತರಿ ಬಾಕಿಯಾಗಿರುವುದು ತಿಳಿದು ಬಂತು. ಶನಿವಾರ ಸಂಜೆ ಮಹಿಳೆಯ ಕುಟುಂಬದವರು ಶಸ್ತ್ರಚಿಕಿತ್ಸೆ ನೆರವೇರಿಸಿದ ನರ್ಸಿಂಗ್ ಹೋಮ್ಗೆ ತೆರಳಿ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ವೈದ್ಯರು ಸ್ಕ್ಯಾನಿಂಗ್ ವರದಿ ಪರಿಶೀಲಿಸಿ ನಾಲ್ಕು ವರ್ಷಗಳ ಹಿಂದೆ ಅದ ಪ್ರಮಾದವನ್ನು ಒಪಿಕೊಂಡಿದ್ದಾರೆ. ಮಾಹಿತಿ ತಿಳಿದು ಮಹಿಳೆಯ ಸಂಬಂಧಿಕರು ನರ್ಸಿಂಗ್ ಹೋಮ್ ಪರಿಸರದಲ್ಲಿ ಜಮಾಯಿಸಿ ವೈದ್ಯಕೀಯ ಸಿಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲು ಮಹಿಳೆಯ ಕುಟುಂಬದವರು ತೆರಳಿದ್ದಾರೆ.