ಕುಂದಾಪುರ: ಎರಡು ಪ್ರತ್ಯ್ಯೇಕ ಘಟನೆಯಲ್ಲಿ ಇಬ್ಬರು ಸೇರಿಕೊಂಡು ಎರಡು ಕಡೆಯಲ್ಲಿ ಹಲ್ಲೆ ನಡೆಸಿದ ಬಗ್ಗ್ಗೆ ಕುಂದಾಪುರ ಠಾಣೆಯಲ್ಲಿ ಎರಡು ಪ್ರಕರಣ ಸೋಮವಾರ ದಾಖಲಾಗಿದೆ. ಕುಂದಾಪುರ ಮುಖ್ಯ ಠಾಣೆಗೆ ದೂರು ನೀಡಲು ಬಂದವರು ಮಹಿಳಾ ಎಎಸ್ಐ ಸೇರಿದಂತೆ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಬರುವ ಮೊದಲು ಇವರು ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ನಡೆಸಿದ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿದೆ.
ಘಟನೆಯ ವಿವರ: ಇಲ್ಲಿನ ಸಿಂಧೂರ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಸಂಜೆ 5ಗಂಟೆ ಸುಮಾರಿಗೆ ಹಿರಿಯ ಕಾಂಗ್ರೆಸ್ ಮುಖಂಡ, ಉದ್ಯಮಿ ಕೆ.ಜಿ. ನಿತ್ಯಾನಂದ ಹೋಟೆಲ್ ಮಾಲೀಕರೊಂದಿಗೆ ವ್ಯವಹಾರ ನಿಮಿತ್ತ ಚರ್ಚಿಸಲು ಕುಳಿತಿರುವ ವೇಳೆ ಪ್ರತಾಪ್ ಮತ್ತು ಗುರುರಾಜ ಚಾತ್ರ ಎಂಬವರು ಆಗಮಿಸಿ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಜರ್ಜರಿತಗೊಂಡಿರುವ ಕೆ.ಜಿ. ನಿತ್ಯಾನಂದ ಅವರನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆಯಲ್ಲದೆ ಕೆ.ಜಿ. ನಿತ್ಯಾನಂದ ಈ ಬಗ್ಗೆ ಕುಂದಾಪುರ ಪೊಲೀಸರಿಗೆ ದೂರು ನೀಡಿದರು.
ಎಎಸ್ಐ ಮೇಲೆ ಹಲ್ಲೆ: ಹಿರಿಯ ಕಾಂಗ್ರೆಸ್ ಮುಖಂಡ ಕೆ.ಜಿ. ನಿತ್ಯಾನಂದ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಅವರ ಕಾರಿನ ಕೀಯನ್ನು ತೆಗೆದುಕೊಂಡು ಠಾಣೆಗೆ ಕಾರಿನಲ್ಲಿ ಆಗಮಿಸಿ 'ಬಾರ್ನಲ್ಲಿ ಗಲಾಟೆ ಆಗಿದ್ದು, ಕೆ.ಜಿ.ನಿತ್ಯಾನಂದ ನಮ್ಮ ನಡುವೆ ಘರ್ಷಣೆಯಾಗಿದೆ. ತಕ್ಷಣ ದೂರು ತೆಗೆದುಕೊಳ್ಳಿ' ಎಂದಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಗದರಿಸಿದ್ದಾರೆ ಎಂದು ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ತಿಳಿಸಿದ್ದಾರೆ. ದೂರು ಸ್ವೀಕರಿಸಲು ಪೊಲೀಸರು ಸಿದ್ಧತೆ ನಡೆಸುತ್ತಿರುವಾಗಲೇ ಗುರುರಾಜ್ ಚಾತ್ರ ಏಕಾಏಕಿ ಎಎಸ್ಐ ಸುಧಾಪ್ರಭು ಅವರನ್ನು ದೂಡಿ ಹಾಕಿ ಅವರಿಗೆ ಗುದ್ದಿದ್ದಾನೆ. ಹಲ್ಲೆ ತಡೆಯಲು ಬಂದ ಪೊಲೀಸ್ ಪೇದೆ ಜಯಕರ ಅವರ ಮೇಲೂ ಈತ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾಗಿರುವ ಎಎಸ್ಐ ಸುಧಾಪ್ರಭು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಎಸ್ಐ ಸುಧಾಪ್ರಭು ಅವರ ದೂರಿನಂತೆ ಈರ್ವರ ಮೇಲೆ ಇನ್ನೊಂದು ದೂರು ದಾಖಲಾಗಿದೆ. ಪೊಲೀಸರು ಆರೋಪಿತರಿಂದ ಕತ್ತಿಯನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.
ಹಲ್ಲೆಯ ಹಿಂದೆ ಇಸ್ಪೀಟು ಕ್ಲಬ್ ಮಾಫಿಯಾ: ಸಾರ್ವಜನಿಕರಿಗೆ ತೊಂದರೆಯಾಗಿರುವ ಇಸ್ಪೀಟ್ ಕ್ಲಬ್ ತೆರವಿಗೆ ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಸರಕಾರಕ್ಕೆ, ಸಂಬಂಧಿತ ಇಲಾಖೆ ದೂರು ಸಲ್ಲಿಸಿದ್ದೇವೆ. ಇದರ ಹಿಂದಿರುವ ಮಾಫಿಯಾ ಶಕ್ತಿಗಳು ಮುಖಂಡ ಕೆ.ಜಿ.ನಿತ್ಯಾನಂದ ಅವರ ಮೇಲೆ ಹಲ್ಲೆಯ ಸಂಚು ನಡೆಸಿವೆ. ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ದ್ವಿತೀಯ ಪ್ರಕರಣ: ಪೊಲೀಸರ ಮೇಲಿನ ಹಲ್ಲೆ ನಡೆದಿರುವ ದ್ವಿತೀಯ ಪ್ರಕರಣ ಇದಾಗಿದೆ. ಕೆಲ ತಿಂಗಳ ಹಿಂದೆ ಇಲ್ಲಿನ ಪಾರಿಜಾತ ವತ್ತದ ಬಳಿ ಕರ್ತವ್ಯನಿರತ ಸಂಚಾರಿ ಪೊಲೀಸ್ ಪೇದೆ ಮಂಜುನಾಥ್ ಅವರ ಮೇಲೆ ಇಬ್ಬರು ಬೈಕ್ ಸವಾರರು ಹಾಡಹಗಲೆ ಹಲ್ಲೆ ನಡೆಸಿದ್ದರು. ಇದೀಗ ಠಾಣೆಗೆ ನುಗ್ಗಿ ಮಹಿಳಾ ಎಎಸ್ಐ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಲ್ಲೆ ನಡೆಸಿದ್ದು , ನಾಗರಿಕರು ತೀವ್ರ ಅಸಮಾಧಾನ ಹೊರಗೆಡಹಿದ್ದಾರೆ. ಪಿಎಸ್ಐ ಸತೀಶ್ ಅವರ ವರ್ಗಾವಣೆ ಬಳಿಕ ಕುಂದಾಪುರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು ಉತ್ತಮ ಪಿಎಸ್ಐಗಳ ನೇಮಕ ನಡೆಯಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.