ಬೈಂದೂರು: ಉಪ್ಪುಂದ, ಬಿಜೂರು, ಕಂಬದಕೋಣೆ, ಭಾಗದಲ್ಲಿ ಬುಧವಾರ ರಾತ್ರಿ ಸಿಡಿಲಿನ ಆರ್ಭಟಕ್ಕೆ ಹಲವು ಮನೆಗಳಿಗೆ ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ. ಉಪ್ಪುಂದ ಗ್ರಾಮದ ಅರೆಕಲ್ಲು ಮನೆಯ ಗಿರಿಜಾ ಪೂಜಾರ್ತಿ ಅವರ ಮನೆಗೆ ಸಿಡಿಲು ಬಡಿದು, ಗೋಡೆ ಬಿರುಕುಗೊಂಡಿದೆ. ಮನೆಯೊಳಗಿನ ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ, ವಯರಿಂಗ್ ಪ್ಲೇಟ್ಗಳು ಕಳಚಿ ಬಿದ್ದಿದ್ದು, ಟಿವಿಗೆ ಹಾನಿಯಾಗಿದೆ.
ಮನೆಯ ಮೇಲ್ಛಾವಣೆ ಬಿರುಕು ಬಿಟ್ಟಿದೆ. ಅಲ್ಲದೇ ಮನೆಯಂಗಳದಲ್ಲಿದ್ದ ತೆಂಗಿನ ಮರಕ್ಕೂ ಹಾನಿಯಾಗಿದೆ. ಸನಿಹದ ಅರೆಕಲ್ಲು ಮನೆ ವಠಾರದ ಹಲವು ಮನೆಗಳಿಗೆ ಹಾನಿಯಾಗಿದೆ. ಈ ಭಾಗದ ಕೆಲವರು ಸಿಡಿಲ ಆಘಾತಕ್ಕೆ ತುತ್ತಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮನೆಗಳ ಗೃಹೋಪಯೋಗಿ ಸೊತ್ತುಗಳು ಹಾನಿಗೊಂಡಿದ್ದು ಅಪಾರ ನಷ್ಟ ಅಂದಾಜಿಸಲಾಗಿದೆ.
ಮಹಿಳೆಗೆ ಗಾಯ: ಬುಧವಾರ ಸಂಜೆಯ ಗುಡುಗು ಸಿಡಿಲು ಆರ್ಭಟಕ್ಕೆ ತಾಲೂಕಿನ ಬೆಳ್ವೆ ಗ್ರಾಮದ ಮಹಿಳೆ ಗಾಯಗೊಂಡಿದ್ದಾರೆ. ಸುರ್ಗೋಳಿ ನಿವಾಸಿ ಕೂಬಿನಾ ಗಾಯಗೊಂಡವರು.