ಶಿರೂರು: ಕ್ಷುಲ್ಲಕ ಕಾರಣಕ್ಕೆ ಅತ್ತೆ ತನ್ನ ಸೊಸೆಯನ್ನೇ ಕತ್ತರಿಯಿಂದ ತಿವಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶಿರೂರಿನ ಮುಗ್ಗಿಬೆಟ್ಟಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಶಿರೂರಿನ ಮಂಜುನಾಥ ಆಚಾರ್ಯ ಪತ್ನಿ ನಾಗರತ್ನ (29) ಕೊಲೆಯಾದ ದುರ್ದೈವಿ. ಅತ್ತೆ ಚಂದು ಯಾನೆ ಚಂದ್ರಾವತಿ ಆಚಾರ್ಯ (55) ಆರೋಪಿ.
ಮೃತ ನಾಗರತ್ನರ ಪತಿ ಮಂಜುನಾಥ ಆಚಾರ್ಯ ಶಿರಸಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದಾರೆ ಎನ್ನಲಾಗಿದೆ. ಮೇ 29ರಂದು ನಡೆಯುವ ತನ್ನ ತಂಗಿಯ ಮದುವೆ ಕಾರ್ಯದ ಹಿನ್ನೆಲೆಯಲ್ಲಿ ತವರು ಮನೆಗೆ ತೆರಳಿದ್ದ ನಾಗರತ್ನ, ಮದುವೆಗೆ ತನ್ನ ಬಟ್ಟೆ ಬರೆಗಳನ್ನು ತರಲು ಭಾನುವಾರ ಸಂಜೆಗೆ ತನ್ನ ಗಂಡನ ಮನೆಗೆ ಬಂದಿದ್ದರು.
ಆ ಸಮಯದಲ್ಲಿ ತನ್ನ ಗೋದ್ರೆಜ್ನಲ್ಲಿ ಇಟ್ಟ ಸೀರೆಯನ್ನು ಅತ್ತೆ ತೆಗೆದು ಧರಿಸಿದ್ದಳು ಎನ್ನಲಾಗಿದ್ದು, ಈ ಸಂಬಂಧ ಪ್ರಾರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸೋಮವಾರ ಬೆಳಗ್ಗೆ ನಾಗರತ್ನ ಮನೆಯಲಿ ಟೈಲರಿಂಗ್ ಮಾಡುತ್ತಿದ್ದಾಗ ಆರೋಪಿ ಚಂದು ಬಟ್ಟೆ ತುಂಡರಿಸುವ ಕತ್ತರಿಯಿಂದ ನಾಗರತ್ನಳ ಕುತ್ತಿಗೆಗೆ ತಿವಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಉಪ್ಪುಂದ ಅಂಬಾಗಿಲಿನ ರಾಮಚಂದ್ರ ಆಚಾರ್ಯ ಅವರ ಪುತ್ರಿಯಾದ ನಾಗರತ್ನ 9 ವರ್ಷ ಹಿಂದೆ ಶಿರೂರಿನ ಮುಗ್ಗಿಬೆಟ್ಟಿನ ಮಂಜುನಾಥ ಆಚಾರ್ಯ ಅವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಪುತ್ರರು ಹಾಗೂ ಎರಡು ವರ್ಷದ ಪುತ್ರಿ ಇದ್ದಾರೆ.