ಚಿತ್ರನಟ ರಘುವೀರ್ ನಿಧನ

ಬೆಂಗಳೂರು: 'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ನಟ ರಘುವೀರ್ (46) ಹೃದಯಾಘಾತದಿಂದ ಗುರುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಧ್ಯಾಹ್ನ ಹೊಟ್ಟೆನೋವಿನ ಕಾರಣಕ್ಕೆ ಬಿಟಿಎಂ ಲೇಔಟ್‌ನ ಗಂಗೋತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಸಂಜೆಯ ಹೊತ್ತಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗರ್ ಆಸ್ಪತ್ರೆಗೆ ವರ್ಗಾಯಿಸಿ ತುರ್ತುನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಲ್ಲಿ ನಿಧನರಾದರು. ಮೃತದೇಹವನ್ನು ರಾತ್ರಿಯೇ ಸಂಪಂಗಿರಾಮನಗರದಲ್ಲಿರುವ ಅವರ ಮನೆಗೆ ಸಾಗಿಸಲಾಯಿತು. ಶುಕ್ರವಾರ ಮಧ್ಯಾಹ್ನದವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿ, ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

1992ರಲ್ಲಿ ಎಸ್.ನಾರಾಯಣ್ ನಿರ್ದೇಶಿಸಿದ 'ಚೈತ್ರದ ಪ್ರೇಮಾಂಜಲಿ' ರಘುವೀರ್ ಅವರ ಪ್ರಥಮ ಸಿನಿಮಾ. ಇದು ಎಸ್.ನಾರಾಯಣ್ ಅವರಿಗೆ ನಿರ್ದೇಶಕ ಪಟ್ಟ ದೊರಕಿಸಿಕೊಟ್ಟ ಮೊದಲ ಸಿನಿಮಾವೂ ಹೌದು. ಮೊದಲ ಸಿನಿಮಾ ಭರ್ಜರಿ ಹಿಟ್ ಆದ ಕಾರಣದಿಂದ ಚಿತ್ರರಂಗದಲ್ಲಿ ಹೊಸ ನಾಯಕ ನಟನಾಗಿ ಬೆಳೆಯುವ ಭರವಸೆ ಮೂಡಿಸಿದ್ದರು. ಎರಡನೇ ಸಿನಿಮಾ 'ಶೃಂಗಾರ ಕಾವ್ಯ' ಕೂಡ ಹಿಟ್ ಆಗಿ ಯಶಸ್ಸು ಹಿಂಬಾಲಿಸಿತ್ತು. ಆದರೆ ನಂತರದ 'ಉಯ್ಯಾಲೆ' 'ತುಂಗಭದ್ರ' 'ಕಾವೇರಿ ತೀರದಲ್ಲಿ' ಹಾಗೂ ಕೊನೆಯ ಚಿತ್ರ 'ಮುಗಿಲ ಚುಂಬನ' ಒಂದಾದ ನಂತರ ಒಂದರಂತೆ ನೆಲಕಚ್ಚಿದವು.

ಆಕಸ್ಮಿಕವಾಗಿ ಚಲನಚಿತ್ರ ರಂಗ ಪ್ರವೇಶಿಸಿ ಆರಂಭದಲ್ಲೇ ಯಶಸ್ಸು ಕಂಡ ನಟ ವೈಯುಕ್ತಿಕ ಬದುಕಿನಲ್ಲಿ ಘಟಿಸಿದ ಅವಘಡಗಳ ಕಾರಣದಿಂದ ದುರಂತ ನಾಯಕ ಎನಿಸಿಕೊಂಡಿದ್ದಾರೆ. ಇವರು ಪ್ರೀತಿಸಿ ಮದುವೆಯಾಗಿದ್ದ ನಟಿ ಸಿಂಧು ಅನಾರೋಗ್ಯದಿಂದ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಆ ಬಳಿಕ ರಘುವೀರ್ ಮತ್ತೊಂದು ಮದುವೆಯಾಗಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com