ಜೈಪುರ: 34 ವರ್ಷ ಪ್ರಾಯದ ರಾಜಸ್ಥಾನ ಪೊಲೀಸ್ ಮಹಿಳಾ ಎಸ್ ಐ ಓರ್ವರು ತನ್ನ ಮೇಲೆ ತನ್ನ ಸಹೋದ್ಯೋಗಿ ಎಸ್ ಐ ಕಳೆದೊಂದು ವರ್ಷದಿಂದ ನಿರಂತರ ಅತ್ಯಾಚಾರವೆಸಗುತ್ತಿದ್ದು ತನ್ನನ್ನು ಬ್ಲಾಕ್ವೆುàಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಿಳಾ ಎಸ್ ಐ ದೂರಿರುವ ಪ್ರಕಾರ 32 ವರ್ಷ ಪ್ರಾಯದ ಮಹಾವೀರ ಪ್ರಸಾದ್ ಎಂಬ ಶ್ರೀಗಂಗಾನಗರದ ಎಸ್ಐ ಕಳೆದ ವರ್ಷ ಡಿಸೆಂಬರ್ 12ರಂದು ಆಕೆಗೆ ಆಕೆಯ ಮನೆಯಲ್ಲೇ ಅಮಲು ಪದಾರ್ಥ ಸವರಲಾದ ಸಿಹಿತಿಂಡಿಯನ್ನು ಕೊಟ್ಟು ಆಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕಾರ ಪೊಲೀಸರು ಮಹಾವೀರ ಪ್ರಸಾದ್ ವಿರುದ್ಧ ಐಪಿಸಿ ಸೆ.376ರ ಅಡಿ ಕೇಸು ದಾಖಲಿಸಿಕೊಂಡಿ ದ್ದಾರೆ.
ಆರಂಭಿಕ ತನಿಖೆಯ ಪ್ರಕಾರ ತಿಳಿದು ಬಂದಿರುವ ಸಂಗತಿ ಎಂದರೆ ಆರೋಪಿ ಹಾಗೂ ಸಂತ್ರಸ್ತ ಮಹಿಳಾ ಎಸ್ಐ ಒಂದೇ ಬ್ಯಾಚಿನವರಾಗಿದ್ದು ಜತೆಯಾಗಿಯೇ ಪೊಲೀಸ್ ತರಬೇತಿ ಪಡೆದವರಾಗಿದ್ದಾರೆ. ಇಬ್ಬರೂ ಉತ್ತಮ ಸ್ನೇಹಿತರಾಗಿದ್ದಾರೆ. ಮಹಿಳಾ ಎಸ್ಐ ತನ್ನ ಪತಿಯಿಂದ ಪ್ರತ್ಯೇಕವಿದ್ದು ಬೇರೊಂದು ಮನೆಯಲ್ಲಿ ವಾಸವಾಗಿದ್ದಾರೆ.
ಪೊಲೀಸರೀಗ ಸಂತ್ರಸ್ತ ಮಹಿಳಾ ಎಸ್ಐಗೆ ಈ ಪ್ರಕರಣವನ್ನು ಮಹಿಳಾ ಠಾಣೆಯಲ್ಲಿ ದಾಖಲಿಸಲು ಸೂಚಿಸಿದ್ದಾರೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.