ದಿಬ್ರೂಗಢ: ತನ್ನ ವೈದ್ಯಕೀಯ ಮಹಿಳಾ ಸಹಪಾಠಿಯನ್ನು ಕೊಂದ ಆರೋಪದ ಮೇಲೆ ಇಲ್ಲಿನ ಅಸ್ಸಾಂ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿ ದೀಪಮಣಿ ಸೈಕಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಿರಿಯ ವೈದ್ಯೆ ಸರಿತಾ ತಸ್ನೀವಾಲ್ ಅವರನ್ನು ಐಸಿಯು ಘಟಕದಲ್ಲಿ ಅತ್ಯಾಚಾರ ಎಸಗಿ, ಶಸ್ತ್ರ ಚಿಕಿತ್ಸೆಯ ಚೂರಿಯನ್ನು ಬಳಸಿ ಕೊಲ್ಲಲಾದ ಆರೋಪದ ಮೇಲೆ ವಾರ್ಡ್ ಬಾಯ್ ಕಿರು ಮೇಶ್ ಎಂಬಾತನನ್ನು ಮೊದಲು ಬಂಧಿಸಲಾಗಿತ್ತು.
ಈತ ತನಿಖೆಯ ವೇಳೆ ಬಾಯಿಬಿಟ್ಟ ಪ್ರಕಾರ ದೀಪಮಣಿ ಸೈಕಿಯಾನನ್ನು ಸಾಂದರ್ಭಿಕ ಸಾಕ್ಷ್ಯಾಧಾರದ ನೆಲೆಯಲ್ಲಿ ಬಂಧಿಸಲಾಯಿತು ಎಂದು ದಿಬ್ರೂಗಢ ಪೊಲೀಸ್ ಸುಪರಿಂಟೆಂಡೆಂಟ್ ರಾಣಾ ಭೂಯಾನ್ ತಿಳಿಸಿದ್ದಾರೆ.
ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ನಿದ್ರಿಸಿಕೊಂಡಿದ್ದ ತಸ್ನಿವಾಲ್ ಅವರನ್ನು ಸೈಕಿಯಾ ಕುತ್ತಿಗೆ ಹಿಸುಕಿ, ಆಕೆಯ ಬಾಯಿಗೆ ಫಿನೈಲ್ ಸುರಿದು ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಚೂರಿಯಿಂದ ಆಕೆಯ ಕುತ್ತಿಗೆಯನ್ನು ಸೀಳಿ ಕೊಂದಿದ್ದ ಎಂದು ವಾರ್ಡ್ ಬಾಯ್ ಹೇಳಿದ್ದಾನೆ.
ತಸ್ನಿವಾಲ್ಳನ್ನು ಕೊಲ್ಲಲು ಕಾರಣವೇನೆಂದು ಸೈಕಿಯಾ ತನಗೆ ತಿಳಿಸಿಲ್ಲ; ಬದಲು "ನಿನಗೆ ನಿನ್ನ ಕೆಲಸ ಬೇಕೆಂದಿದ್ದರೆ ನೀನು ನನ್ನ ಜತೆಗೆ ಸಹಕರಿಸು' ಎಂದು ನನಗೆ ಅಪ್ಪಣೆ ಕೊಡಿಸಿದ್ದಾನೆ ಎಂದು ವಾರ್ಡ್ ಬಾಯ್ ಹೇಳಿದ್ದಾನೆ.