ಬೈಂದೂರು ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೈಂದೂರು: ಇಲ್ಲಿನ ಕಂದಾಯ ಅಧಿಕಾರಿ ಸಂತೋಷ ಎಂಬವರು ಮುದೂರು ಗ್ರಾಮದ ಚಾಕೋ ಟಿ.ಸಿ. ಅವರ ಜಾಗದ ಖಾತೆ ಬದಲಾವಣೆ ಮಾಡಿಸಿಕೊಡಲು ಲಂಚ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದು, ಅದರಂತೆ ಮಂಗಳವಾರ ಮಧ್ಯಾಹ್ನ ತನ್ನ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಪ್ರಕರಣದ ವಿವರ: ಮುದೂರು ಗ್ರಾಮದ ಚಾಕೊ ಟಿ.ಸಿ. ಎಂಬುವವರು ತನ್ನ 1.65 ಎಕರೆ ಜಾಗದ ಖಾತೆ ಬದಲಾವಣೆ ಮಾಡಲು ಬೈಂದೂರು ಕಂದಾಯ ನಿರೀಕ್ಷಕರ ಕಚೇರಿ ಅರ್ಜಿ ಸಲ್ಲಿಸಿದರು. ಕಂದಾಯ ಅಧಿಕಾರಿಗಳು ಆ ಜಾಗದ ಖಾತೆ ಬದಲಾವಣೆ ಮಾಡಿಕೊಡಬೇಕಾದರೆ 25ಸಾವಿರ ರೂ. ಲಂಚ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. 

ಆದರೆ ಚಾಕೋ ಇಷ್ಟೊಂದು ಹಣವನ್ನು ನೀಡಲು ಸಾಧ್ಯವಿಲ್ಲ, 12 ಸಾವಿರ ರೂ. ನೀಡುತ್ತೇವೆ ಎಂದು ಒಪ್ಪಿಗೆ ಸೂಚಿಸಿ, ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕಂದಾಯ ಅಧಿಕಾರಿ ಸಂತೋಷ ಲಂಚ ಬೇಡಿಕೆ ಇಟ್ಟ ದಾಖಲೆಯೊಂದಿಗೆ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಖಾತೆ ಬದಲಾವಣೆಗೋಸ್ಕರ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 

ಲೋಕಾಯುಕ್ತ ಉಡುಪಿ ಡಿವೈಎಸ್ಪಿ ಉಮೇಶ್ ಜಿ. ಶೇಟ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮೋಹನ ಕೊಠಾರಿ, ಸಿಬ್ಬಂದಿಗಳಾದ ನಾಗೇಶ್ ಉಡುಪ, ಶ್ರೀಧರ ಜಿ., ರಿಯಾಜ್ ಅಹಮದ್, ಅಶೋಕ್, ರಘುರಾಮ್, ಸತ್ಯವತಿ ದಾಳಿಯಲ್ಲಿ ಹಾಜರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com