
ಗುರುವಾಯನಕೆರೆ ಸಮೀಪದ ಪಣೆಜಾಲು ಎಂಬಲ್ಲಿ ಘಟನೆ ನಡೆದಿದೆ. ಕುವೆಟ್ಟು ಗ್ರಾಮದ ಪಣೆಜಾಲುವಿನ ಮಹಮ್ಮದ್ ಶಾಫಿ ಹಾಗೂ ಪೌಝಿಯಾ ಆರೋಪಿಗಳಾಗಿದ್ದು ಪೌಝಿಯಾಳನ್ನು ಬಂಧಿಸಲಾಗಿದೆ. ಇವರು ತಮ್ಮ ಐದು ವರ್ಷದ ಮಗು ಫೈಮಾಗೆ ಚಿತ್ರಹಿಂಸೆ ನೀಡುತ್ತಿದ್ದರು. ದೊಣ್ಣೆಯಿಂದ ಕಾಲಿನ ಗಂಟು, ಕೈ, ಮುಖ, ಮೂಗು, ಕತ್ತುವಿಗೆ ಗಾಯವಾಗುವಂತೆ ಹೊಡೆದಿದ್ದರು.
ಇವರು ಕಳೆದ ಒಂದು ತಿಂಗಳಿನಿಂದ ಪಣೆಜಾಲಿನ ರುಬಿಯಾ ಎಂಬವರ ಬಾಡಿಗೆ ಕಟ್ಟಡದಲ್ಲಿ ವಾಸ್ತವ್ಯ ಮಾಡಿದ್ದರು.
ಈ ಮಧ್ಯೆ ಮಗುವಿನ ತಂದೆ ಎನಿಸಿಕೊಂಡ ಮಹಮ್ಮದ್ ಶಾಫಿ ಸಂಘಟನೆಯೊಂದರ ಸದಸ್ಯರಿಂದ ತನಗೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ. ಬೆಳ್ತಂಗಡಿ ಪೊಲೀಸರಿಗೆ ದೂರು ಕೂಡಾ ನೀಡಿದ್ದು ಪ್ರಕರಣ ದಾಖಲಾಗಿದೆ. ಆದರೆ ಆಸ್ಪತ್ರೆಗೆ ದಾಖಲಾಗಿದ್ದಾತ ತನ್ನ ಮೇಲೆಯೂ ಪ್ರಕರಣ ದಾಖಲಾದ ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಈ ದಂಪತಿ ಮೊದಲು ಪುತ್ತೂರಿನಲ್ಲಿ ಇದ್ದರು. ಮಹಮ್ಮದ್ ಶಾಫಿ , ಪೌಝಿಯಾಳ ಎರಡನೇ ಪತಿಯಾಗಿದ್ದು ಫೈಮಾ ತನ್ನ ನೇರ ಮಗಳಲ್ಲದ ಕಾರಣ ಶಾಫಿ ಚಿತ್ರಹಿಂಸೆ ನೀಡುತ್ತಿದ್ದ. ಪೌಝಿಯಾ ಇದನ್ನು ಸಹಿಸಿಕೊಂಡು ಪತಿಯ ಕೃತ್ಯಗಳಲ್ಲಿ ಪರೋಕ್ಷವಾಗಿ ಭಾಗಿಯಾಗುತ್ತಿದ್ದಳು. ಪುತ್ತೂರಿನಲ್ಲಿದ್ದಾಗ ಒಂದು ಬಾರಿ ಮಗುವನ್ನು ಗುಡ್ಡದಲ್ಲಿ ರಾತ್ರಿಯಿಡೀ ಕಳೆಯುವಂತೆ ಬಿಟ್ಟು ಬಂದಿದ್ದ. ಆಗ ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದು ಅಲ್ಲಿ ಮುಚ್ಚಳಿಕೆ ಬರೆಸಲಾಗಿತ್ತು. ನಂತರವೂ ತನ್ನ ವಿಕೃತ ಚಷ್ಟೆ ಮುಂದುವರಿಸಿ ಮಗುವಿಗೆ ಇಡಬಾರದ ಜಾಗದಲ್ಲಿ ಸಿಗರೇಟ್ ಇಟ್ಟು ಸುಟ್ಟಿದ್ದ. ಈ ಬಾರಿಯೂ ನಿರಂತರ ಚಿತ್ರಹಿಂಸೆ, ಹಲ್ಲೆ, ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ತಿಳಿದು ಎಸ್ಡಿಪಿಐ ಅಧ್ಯಕ್ಷ ಅಕºರ್, ಜಿಲ್ಲಾ ಮುಖಂಡ ಹೈದರ್ ನೀರ್ಸಾಲ್ ಹಾಗೂ ಸಂಘಟನೆ ಸದಸ್ಯರು ಮನೆಗೆ ಭೇಟಿ ನೀಡಿದ್ದರು. ಆಗ ಮಗುವೇ ತನ್ನ ಆಘಾತವನ್ನು ಹೇಳಿಕೊಂಡಿದ್ದು ಮಗುವಿನ ಮೈಮೇಲಿನ ಗಾಯಗಳು ಪ್ರತ್ಯಕ್ಷ ಸಾಕ್ಷಿಯಾಗಿತ್ತು. ಸಂಘಟನೆಯವರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾನವ ಹಕ್ಕು ಆಯೋಗ ಪರಿಷತ್ನವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಭೇಟಿ ನೀಡಿದ್ದಾರೆ. ಮಗುವಿಗೆ ಈಗ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಗೆ 1 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಸೋಮವಾರ ನ್ಯಾಯಾಲಯಕ್ಕೆ ಮರುಹಾಜರುಪಡಿಸಬೇಕಿದೆ.