ಸೋಲ್: ದಕ್ಷಿಣ ಕೊರಿಯದ ದಕ್ಷಿಣ ಕರಾವಳಿಯಲ್ಲಿ 476 ಮಂದಿಯನ್ನು ಒಯ್ಯುತ್ತಿದ್ದ ಪ್ರಯಾಣಿಕರ ವಿಹಾರ ನೌಕೆಯೊಂದು ಮುಳುಗಿದ್ದು ಈ ವರೆಗೆ ಇಬ್ಬರು ಮಡಿದಿರುವುದಾಗಿಯೂ ಇತರ 14 ಮಂದಿ ಗಾಯಗೊಂಡಿರುವುದಾಗಿಯೂ ವರದಿಯಾಗಿದೆ.
ನೌಕೆ ಮುಳುಗಿರುವ ಸ್ಥಳದಲ್ಲಿ ಡಜನ್ಗಟ್ಟಲೆ ಮಿಲಿಟರಿ ಬೋಟುಗಳು ಮತ್ತು ಹೆಲಿಕಾಪ್ಟರ್ಗಳು ತೀವ್ರ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.
ನೌಕೆಯಲ್ಲಿ 325 ಮಂದಿ ಹೈಸ್ಕೂಲು ವಿದ್ಯಾರ್ಥಿಗಳಿದ್ದರು. ಇವರು ಶಾಲಾ ಪ್ರವಾಸಾರ್ಥ ಈ ನೌಕೆಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
476 ಮಂದಿಯನ್ನು ದಕ್ಷಿಣ ಕೊರಿಯ ದೂರ ಸಮುದ್ರದಲ್ಲಿರುವ ಜೆಜು ದ್ವೀಪಕ್ಕೆ ವಿಹಾರಾರ್ಥವಾಗಿ ಒಯ್ಯುತ್ತಿದ್ದ ನೌಕೆಯು ಬುಧವಾರ ಬೆಳಗ್ಗೆ ಒಂದು ಬದಿಗೆ ವಾಲತೊಡಗಿತು. ತತ್ಕ್ಷಣ ನೌಕೆಯಿಂದ ಅಪಾಯದ ಕರೆ ಕೇಳಿ ಬಂತು ಎಂದು ದಕ್ಷಿಣ ಕೊರಿಯ ಭದ್ರತಾ ಸಚಿವಾಲಯ ತಿಳಿಸಿದೆ.
ಇಬ್ಬರು ಕೋಸ್ಟ್ಗಾರ್ಡ್ ಅಧಿಕಾರಿಗಳ ಪ್ರಕಾರ ಪಾರ್ಕ್ ಜಿ ಯಾಂಗ್ ಎಂಬ 27 ವರ್ಷ ಪ್ರಾಯದ ಮಹಿಳೆ ಮತ್ತು ಗುರುತು ಪತ್ತೆಯಾಗದ ಇನ್ನೋರ್ವ ವ್ಯಕ್ತಿ ಈ ಅವಘಡದಲ್ಲಿ ಮೃತಪಟ್ಟಿದ್ದಾರೆ.
ಈ ವರೆಗೆ 138 ಮಂದಿ ಪ್ರಯಾಣಿಕರನ್ನು ಪಾರುಗೊಳಿಸಲಾಗಿದೆ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ. ಆದರೆ ರಕ್ಷಣಾ ಕಾರ್ಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.