ಸಾಲಿಗ್ರಾಮ : ಸಮೀಪದ ಯಡಬೆಟ್ಟು ಬಳಿ ಖಾಸಗಿ ಕಂಪನಿಯೊಂದಕ್ಕೆ ಸೇರಿದ ಸುಮಾರು 530 ಏಕರೆ ಜಾಗದಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಅಕಸ್ಮಿಕ ಉಂಟಾಗಿ ಸ್ಥಳಿಯರು ಆತಂಕಪಡುವಂತಾಯಿತು. ಘಟನಾ ಸ್ಥಳಕ್ಕೆ ಕುಂದಾಪುರ ಆಗ್ನಿಶಾಮಕ ದಳದ ಸದಸ್ಯರು ಮತ್ತು ಸ್ಥಳೀಯರು ಒಟ್ಟಾಗಿ ಸುಮಾರು 3 ಗಂಟೆಗಳ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಸಫಲರಾದರು.
ಸ್ಥಳೀಯರೋರ್ವರು ಮಣ್ಣು ಹದಮಾಡಲು ತಮ್ಮ ಗದ್ದೆಯಲ್ಲಿ ಬೆಂಕಿ ಹಾಕಿ ತೆರಳಿದ್ದರು ಎನ್ನಲಾಗಿದ್ದು, ಗಾಳಿಯ ರಭಸಕ್ಕೆ ಒಣಗಿದ ಹಾಳು ಭೂಮಿಯಲ್ಲಿ ಬೆಳೆದಿದ್ದ ಹುಲ್ಲಿಗೆ ಬೆಂಕಿ ತಗುಲಿ ಜನ ವಸತಿ ಇರುವ ಕಡೆಗೆ ಬೆಂಕಿಯ ಕೆನ್ನಾಲಗೆ ಚಾಚಿತ್ತು. ಸ್ಥಳಿಯರು ಬೆಂಕಿಯ ತೀವ್ರತೆಗೆ ಸ್ವಲ್ಪ ಸಮಯ ಭಯಭೀತರಾದರು. ಹಿಂದೆ ಕಾರ್ಕಡ ಭಾಗದಲ್ಲಿ ಕೂಡ ಹೀಗೆ ಬೆಂಕಿ ಕಾಣಿಸಿಕೊಂಡು ಅನೇಕ ಎಕರೆ ಪ್ರದೇಶ ಸುಟ್ಟು ಕರಕಲಾಗಿತ್ತು.