ಮೂಲ್ಕಿ: ನಾಲ್ಕು ವರ್ಷದÀ ಪ್ರೀತಿಯ ನಡುವೆ ಇನ್ನೋರ್ವನ ಸಂಗ ಬಯಸಿದ ಪ್ರಿಯತಮೆ ಆತನೊಂದಿಗೆ ಸೇರಿಕೊಂಡು ಪ್ರಿಯತಮನನ್ನು ಅಪಘಾತ ನಡೆಸುವ ಮೂಲಕ ಕೊಲೆ ನಡೆಸಿರುವ ಘಟನೆ ಹಳೆಯಂ ಗಡಿ ಸಮೀಪದ ಪಾವಂಜೆ ಯಲ್ಲಿ ನಡೆದಿದೆ. ಸದ್ಯ ಜೋಡಿ ಯನ್ನು ಮೂಲ್ಕಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಹಿನ್ನೆಲೆ
ಮಂಗಳವಾರ ಮುಂಜಾನೆ ಐದು ಗಂಟೆಯ ಸುಮಾರಿಗೆ ಪಾವಂಜೆಯ ರಸ್ತೆ ಬದಿಯಲ್ಲಿ ಯುವಕನ ಜರ್ಜರಿತವಾದ ದೇಹ, ಪಲ್ಸರ್ ಬೈಕ್ನೊಂ ದಿಗೆ ಪತ್ತೆಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಕೂಡಲೇ 108 ಆಂಬ್ಯುಲೆನ್ಸ್ಗೆ ಕರೆ ಮಾಡಿ ಮಂಗಳೂರಿನ ಮಂಗಳಾ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಲಾಗಿತ್ತು.
ಈ ನಡುವೆ ಗುಟುಕು ಜೀವ ಉಳಿಸಿ ಕೊಂಡಿದ್ದ ಆತ ತನ್ನ ಪ್ರೀತಿಯ ಕಥೆಯನ್ನು ವಾಹನದಲ್ಲಿದ್ದವರಿಗೆ ವಿವರಿಸಿದ್ದು, ಮೃತ ಯುವಕ ಈ ಹಿಂದೆ ಮೂಲ್ಕಿಯಲ್ಲಿ ನೆಲೆಸಿದ್ದ ಸದ್ಯ ನಿಟ್ಟೆ ಸಮೀಪದ ಬೋಳ ನಿವಾಸಿ ಅವಿನಾಶ್ ಸುವರ್ಣ(21) ಎಂದು ಗುರುತಿಸಲಾಗಿದೆ.
ಬೋಳ ನಿವಾಸಿ ಅವಿನಾಶ್ ತಂದೆ ನಿತ್ಯಾನಂದ ಸುವರ್ಣ ಕೆಲವು ವರ್ಷಗಳ ಹಿಂದೆ ಮೂಲ್ಕಿಯಲ್ಲಿ ರಿಕ್ಷಾ ಓಡಿಸುತ್ತಿದ್ದರು. ಈ ವೇಳೆ ಇಲ್ಲಿಯೇ ಕಲಿಯುತ್ತಿದ್ದ ಅವಿನಾಶ್ ಗೆ ಮೂಲ್ಕಿ ಪಕ್ಕದ ಕೊಳಚಿಕಂಬ್ಳ ಪಡ್ಡಾಯಿ ಬೈಲು ನಿವಾಸಿ ಸುಷ್ಮಾ ಪ್ರೆಸಿಲ್ಲಾ(20) ಎಂಬಾಕೆ ಯ ಪರಿಚಯವಾಗಿತ್ತು. ಮೂಲ್ಕಿಯಲ್ಲಿ ಹೈಸ್ಕೂಲ್ ಓದುತ್ತಿದ್ದಾಗಲೇ ಅವಿನಾಶ್ ಜೊತೆ ಪ್ರೇಮ ವ್ಯವಹಾರ ಆರಂಭಿಸಿದ್ದ ಈಕೆ ನಾಲ್ಕು ವರ್ಷಗಳ ಕಾಲ ಆತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದಳು. ಸುಷ್ಮಾ ಕಾಲೇಜ್ ಮುಗಿಸಿ ಮಂಗಳೂರಿನ ಎಂಫಸಿಸ್ನಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರವೂ ಇವರ ಓಡಾಟವಿತ್ತು. ಹಗಲು-ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದ ಸುಷ್ಮಾ ಅಲ್ಲೇ ಪಿ.ಜಿ.ಯಲ್ಲಿ ಉಳಿದಿದ್ದು ಜೋಡಿಯ ಒಡನಾಟಕ್ಕೆ ಭಂಗವಿರಲಿಲ್ಲ ಈ ವೇಳೆ ಸುಷ್ಮಾಳಿಗೆ ಕಳೆದ ಎಂಟು ತಿಂಗಳಿಂದ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಕ್ಯಾಬ್ ಡ್ರೈವರ್ ಮೂಲತ: ಹಾಸನ ಜಿಲ್ಲೆಯ ನಿವಾಸಿ, ಪ್ರಸ್ತುತ ಜೆಪ್ಪುವಿನಲ್ಲಿ ವಾಸ್ತವ್ಯವಿದ್ದ ಹರೀಶ್ ಯಾನೆ ರಂಜ ಎಂಬಾತನ ಪರಿಚಯವಾಗಿತ್ತು. ರಾತ್ರಿ-ಹಗಲು ಪಾಳಿಯಲ್ಲಿ ಸುಷ್ಮಾಳನ್ನು ಸಂಸ್ಥೆಗೆ ಬಿಡಲು ಇದೇ ಹರೀಶ್ ತನ್ನ ಸುಮೋ ಕೊಂಡೊಯ್ಯುತ್ತಿದ್ದ ಕಾರಣ ಹರೀಶ್ ಬಹಳ ಸುಲಭವಾಗಿ ಸುಷ್ಮಾಗೆ ಹತ್ತಿರವಾಗಿದ್ದ. ಇವರಿಬ್ಬರ ನಡುವಿನ ಸಂಬಂಧ ಸಂಸ್ಥೆಯ ಸಿಬ್ಬಂದಿಗೂ ತಿಳಿದಿತ್ತು. ಆದರೆ ಪ್ರಿಯಕರ ಅವಿನಾಶ್ಗೆ ತಿಳಿದಿರಲಿಲ್ಲ. ಆದರೆ ತನ್ನ ಮೊದಲ ಪ್ರೇಮಿಯ ಬಗ್ಗೆ ಹರೀಶ್ಗೆ ವಿವರಿಸಿದ್ದ ಸುಷ್ಮಾ ಆತನಿಗೆ ಫೋನ್ ಮೂಲಕ ಬೆದರಿಕೆಯೊಡ್ಡಿದ್ದಳು. ಹರೀಶ್ ಒಂದಲ್ಲ, ಸುಮಾರು ಬಾರಿ ನಮ್ಮ ನಡುವೆ ಡೀಪ್ ಲವ್ ಇದೆ, ನೀನು ಸುಮ್ಮನೆ ಮಧ್ಯೆ ಬರಬೇಡ, ಮೀಟ್ ಆಗೋದೆಲ್ಲ ಬೇಡ ಎಂದು ಎಚ್ಚರಿಸಿದ್ದ. ಆದರೆ ಅವಿನಾಶ್ಗೆ ತನ್ನ ಪ್ರೇಯಸಿಯನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ.
ರಾತ್ರಿ ಬೆಳಗಾಗುವುದರೊಳಗೆ ನಡೆದಿತ್ತು ಹತ್ಯೆ: ಅವಿನಾಶ್ಗೆ ತನ್ನನ್ನು ಸುಷ್ಮಾ ದೂರ ಮಾಡುತ್ತಿದ್ದಾಳೆ ಎಂದು ಅನಿಸಲಾರಂಭಿಸಿತ್ತು. ಅನೇಕ ಬಾರಿ ಫೋನ್ ಮಾಡಿದರೂ ಆಕೆ ಕಟ್ ಮಾಡುತ್ತಿದ್ದಳು. ಮೆಸೇಜ್ ಮಾಡಿದರೂ ನಿನ್ನಷ್ಟಕ್ಕೆ ನೀನಿರು ಎಂದಿದ್ದಳು. ಆದರೆ ಅವಿನಾಶ್ ಸುಮ್ಮನಿರಲಿಲ್ಲ. ಸೋಮವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ತನ್ನ ಪಲ್ಸರ್ ಬೈಕ್ ಹಿಡಿದುಕೊಂಡು ನೇರ ಎಂಫಸಿಸ್ ಗೇಟ್ ಮುಂಭಾಗಕ್ಕೆ ಹೋಗಿದ್ದ. ಅಲ್ಲಿದ್ದ ಗಾರ್ಡ್ ಬಳಿ ಸುಷ್ಮಾಳನ್ನು ಕರೆಯಲು ಹೇಳಿದ್ದಾನೆ. ಸುಷ್ಮಾ ಬಂದವಳೇ, ಅವನ ಪರಿಚಯವೇ ತನಗಿಲ್ಲ ಎಂದಿದ್ದಳು. ಗಾರ್ಡ್ಗಳು ಅವಿನಾಶ್ನನ್ನು ಹಿಡಿದು ಹೊರದಬ್ಬಿದ್ದರು. ಅಲ್ಲಿಂದ ಓಡಿಬಂದ ಅವಿನಾಶ್ ಮೂಲ್ಕಿಗೆ ಬಂದು ತನ್ನ ಸ್ನೇಹಿತರಲ್ಲಿ ನಡೆದ ಘಟನೆಯನ್ನು ವಿವರಿಸಿದ್ದನು. ಗೆಳೆಯರು ಆತನನ್ನು ಸಮಾಧಾನಿಸಿ ಬೋಳದ ಮನೆಗೆ ಕಳುಹಿಸಿದ್ದರು.
ನಿನ್ನೆ ನಸುಕಿನ ಜಾವ ಸುಷ್ಮಾ ಕೆಲಸ ಮುಗಿಸಿ ಮನೆಗೆ ಹೊರಡುತ್ತಲೇ ಅವಿನಾಶ್ ಮೊಬೈಲ್ಗೆ ಸಂದೇಶ ಕಳುಹಿಸಿ ತುರ್ತಾಗಿ ಭೇಟಿಯಾಗುವಂತೆ ಕರೆದಿದ್ದಳು. ಸುಷ್ಮಾ ಮತ್ತೆ ತನ್ನನ್ನು ಕರೆದಿದ್ದು ಯಾಕಿರಬಹುದು ಎಂದು ಮಂಗಳೂರಿಗೆ ಹೊರಟ ಅವಿನಾಶ್ ಪಾವಂಜೆ ಸಮೀಪಿಸುತ್ತಲೇ ಸುಮೋ ವಾಹನ ಹಿಂದಿನಿಂದ ಬಂದು ಬೈಕ್ಗೆ ಗುದ್ದಿದೆ. ತನ್ನ ಬೈಕ್ಗೆ ಡಿಕ್ಕಿ ಹೊಡೆದ ಸುಮೋ ಯಾರದ್ದು ಎಂದು ತಿಳಿಯಲು ಬೈಕ್ ಅನ್ನು ರಸ್ತೆ ಪಕ್ಕ ನಿಲ್ಲಿಸಿ ನಿಂತಿದ್ದ ಸುಮೋ ಪಕ್ಕ ಹೋಗುತ್ತಲೇ ಸುಮೋ ಒಳಗೆ ಹರೀಶ್ ಮತ್ತಾತನ ಸಹಚರರು ಕಾಣಸಿಕ್ಕಿದ್ದರು. ಅಷ್ಟರಲ್ಲಿ ರಸ್ತೆಯಲ್ಲಿ ನಿಂತಿದ್ದ ಅವಿನಾಶ್ ಮೇಲೆ ಮತ್ತೆ ಸುಮೋ ಹರಿಸಿದ ಹರೀಶ್ ಮತ್ತಾತನ ತಂಡ ಸ್ಥಳದಿಂದ ಪರಾರಿಯಾಗಿತ್ತು. ಆಂಬ್ಯುಲೆನ್ಸ್ ಒಳಗೆ ಗುಟುಕುಜೀವ ಉಳಿಸಿಕೊಂಡಿದ್ದ ಅವಿನಾಶ್, ‘ನನ್ನನ್ನು ಕೊಂದಿದ್ದು ಹರೀಶ್, ಆತ ಸುಷ್ಮಾಳ ಲವರ್, ಆತ ನನಗೆ ಈ ಹಿಂದೆಯೂ ಬೆದರಿಕೆಯೊಡ್ಡಿದ್ದ. ಇದನ್ನು ಪೊಲೀಸರಿಗೆ ತಿಳಿಸಿ’ ಎಂದು ಹೇಳಿಕೊಂಡಿದ್ದು ಕೊಲೆ ಪ್ರಕರಣದ ರಹಸ್ಯ ಬೆಳಕಿಗೆ ಬರಲು ಕಾರಣವಾಯಿತು.
ಪೊಲೀಸ್ ವಶದಲ್ಲಿ ಪ್ರೇಮಿಗಳು
ಪ್ರಕರಣಕ್ಕೆ ಸಂಬಂಧಿಸಿ ಸುಷ್ಮಾ ಮತ್ತಾಕೆ ಯ ಪ್ರಿಯಕರ ಹರೀಶ್ನನ್ನು ಮೂಲ್ಕಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹರೀಶ್ನನ್ನು ಸಂಜೆಯ ವೇಳೆ ಪೊಲೀಸರು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಪ್ರಕರಣವನ್ನು ಅಪಘಾತವೆಂದು ಬಿಂಬಿಸಲು ಹೊರಟಿದ್ದ ಜೋಡಿಯನ್ನು ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆಯುವ ಮೂಲಕ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಅವಿನಾಶ್ ರಾತ್ರಿ ಎಂಫಸಿಸ್ ಗೆ ಹೋಗಿದ್ದನ್ನು ಸುಷ್ಮಾ ತನ್ನ ಪ್ರೇಮಿ ಹರೀಶ್ಗೆ ತಿಳಿಸಿದ್ದಳು ಮಾತ್ರವಲ್ಲದೆ ತನಗೆ ಆತ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿದ್ದಳು. ಹೀಗಾಗಿ ಆತನನ್ನು ಕೊಲೆಗೈದೆ ಎಂದು ಹರೀಶ್ ತಪ್ಪೊಪ್ಪಿಕೊಂಡಿದ್ದಾನೆ.