ಮೀರತ್: ತನ್ನ ಪುತ್ರಿಗೆ ಕಿರುಕುಳ ನೀಡುವುದನ್ನು ಪ್ರಶ್ನಿಸಿದ 42 ವರ್ಷ ಪ್ರಾಯದ ವೈದ್ಯರೊಬ್ಬರನ್ನು ಮೂವರು ತರುಣ ದುಷ್ಕರ್ಮಿಗಳು ನಿಷ್ಕರುಣೆಯಿಂದ ಹೊಡೆದು ಸಾಯಿಸಿರುವ ಘಟನೆ ಮೀರತ್ ಜಿಲ್ಲೆಯ ಇಂಚೌಲಿ ಎಂಬಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೀಡಾಗಿ ಮೃತಪಟ್ಟಿರುವ ವೈದ್ಯ ಇಂದ್ರೇಶ್ ಪರಾಶರ್ ಅವರ ಸಂಬಂಧಿಕರು ನೀಡಿರುವ ದೂರಿನ ಪ್ರಕಾರ ಸೋಮವಾರ ರಾತ್ರಿ ಪರಾಶರ್ ಅವರು ತಮ್ಮ ಕ್ಲಿನಿಕ್ನಿಂದ ಮನೆಗೆ ಮರುಳುತ್ತಿದ್ದಾಗ ಮೂವರು ಪುಂಡ ಯುವಕರಾದ ನಿಶು, ರಾಹುಲ್ ಮತ್ತು ಮಾಯಾಂಕ್ ಎಂಬವರು ಕಬ್ಬಿಣದ ಸರಳುಗಳು ಹಾಗೂ ದೊಣ್ಣೆಯಿಂದ ಪರಾಶರ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ಸಾಯಿಸಿದ್ದಾರೆ.
ಪ್ರಾಣ ಉಳಿಸಿಕೊಳ್ಳಲು ಪಕ್ಕದ ಜಿಮ್ನೆಶಿಯಂ ನತ್ತ ಧಾವಿಸಿದ ಪರಾಶರ್ ಅವರನ್ನು ಬೆನ್ನಟ್ಟಿದ ದುಷ್ಕರ್ಮಿಗಳು ಅಲ್ಲಿಯೇ ಅವರ ಮೇಲೆ ರಾಡುಗಳಿಂದ ಹಲ್ಲೆಗೈದು ಕೊಂದು ಬಳಿಕ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ವೈದ್ಯ ಪರಾಶರ್ ಅವರನ್ನು ಪೊಲೀಸರು ಆಸ್ಪತ್ರೆಗೆ ಒಯ್ದರೂ ಅಷ್ಟರೊಳಗಾಗಿ ಆವರು ಕೊನೆಯುಸಿರೆಳೆದಿದ್ದರು.
ಕೊಲೆ ಆರೋಪಿಗಳಲ್ಲಿ ಓರ್ವನಾದ ನಿಶುವನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ. ಮೂವರೂ ಕೊಲೆ ಆರೋಪಿಗಳು ಡಾ| ಪರಾಶರ್ ಅವರ ನೆರೆಯವರಾಗಿರುವ ಗಂಗಾನಗರ ನಿವಾಸಿ ಅಶ್ವಿನಿ ಶರ್ಮಾ ಎಂಬವರ ಪುತ್ರರಾಗಿದ್ದು ಇವರು ಪರಾಶರ್ ಅವರ ಪುತ್ರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದರು.
ಈ ಬಗ್ಗೆ ಪರಾಶರ್ ಅವರು ಶರ್ಮಾ ಅವರ ಮನೆಗೆ ಹೋಗಿ ಅವರ ಪುತ್ರರ ಬಗ್ಗೆ ದೂರಿದ್ದರು. ಇದಕ್ಕೆ ಪ್ರತೀಕಾರವಾಗಿ ಆರೋಪಿಗಳು ಡಾ| ಪರಾಶರ ಅವರ ಕೊಲೆ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.