ಕುಂದಾಪುರ : ಉಡುಪಿ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಹೊಂದಿರುವ ಕುಖ್ಯಾತ ರೌಡಿ ಗೋಲ್ಡನ್ ಸುರೇಶ್ ಯಾನೆ ಸುರೇಶ್ ಪೂಜಾರಿ ಮೇಲೆ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಸುರೇಶ್ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಅದರಂತೆ ಗೋಲ್ಡನ್ ಸುರೇಶನನ್ನು ಬುಧವಾರ ರಾತ್ರಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗೋಲ್ಡನ್ ಸುರೇಶ ಹಲ್ಲೆ, ಸುಲಿಗೆ, ಬೆದರಿಕೆ, ಕೊಲೆಯತ್ನ, ಮಾದಕ ದ್ರವ್ಯ ಮಾರಾಟ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯಾಗಿದ್ದ. ಕೋಟ, ಕುಂದಾಪುರ, ಮಣಿಪಾಲ ಮತ್ತು ಉಡುಪಿ ಠಾಣೆಯಲ್ಲಿ ಆತನ ಮೇಲೆ ರೌಡಿ ಶೀಟ್ ಇತ್ತು.