ಕುಂದಾಪುರ: ಲೋಕಸಭಾ ಚುನಾವಣೆ ಕರ್ತವ್ಯದಲ್ಲಿದ್ದ ಕುಂದಾಪುರದ ಆಹಾರ ಶಿರಸ್ತೇದಾರ ಜನಾರ್ದನ (59) ಭಾನುವಾರ ಸಾವಿಗೀಡಾಗಿದ್ದಾರೆ. ಚುನಾವಣೆ ಸಂಬಂಧಿ ಕಾರ್ಯದಲ್ಲಿ ಇಲ್ಲಿನ ತಾಲೂಕಿನ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ನಿರತರಾಗಿದ್ದ ಅವರಿಗೆ ಮಧ್ಯಾಹ್ನ 1.30ರ ಸುಮಾರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗುವ ಹಾದಿಯಲ್ಲಿ ಮತಪಟ್ಟಿದ್ದಾರೆ. ಆರೋಗ್ಯವಂತರಾಗಿಯೇ ಇದ್ದ ಜನಾರ್ದನ್ ಕಚೇರಿಗೆ ಬಂದಾಗ ಎರಡು ಸಲ ವಾಂತಿ ಮಾಡಿಕೊಂಡಿದ್ದರೆನ್ನಲಾಗಿದೆ. ನೀರು ಕುಡಿದು ಸಾವರಿಸಕೊಂಡ ಅವರು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರು. ಬಿಡುವಿರದ ಕೆಲಸದಿಂದ ರಕ್ತದೊತ್ತಡ ಏರಿಕೆಯಾಗಿ ಹೃದಯಾಘಾತಕ್ಕಿಡಾಗಿದ್ದಾರು ಎನ್ನಲಾಗಿದೆ.
ಬೈಂದೂರು ಮೈಯಾಡಿಯ ಹೆಬ್ಬಾಗಿಲು ಮನೆ ನಿವಾಸಿಯಾಗಿದ್ದ ಜನಾರ್ದನ್ ಈ ಹಿಂದೆ ಬಂಟ್ವಾಳದಲ್ಲಿ ಫುಡ್ ಇನ್ಸ್ಪೆಕ್ಟರ್ ಆಗಿದ್ದು, ಕುಂದಾಪುರದಲ್ಲಿ ಕಳೆದ 1 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಫುಡ್ ಡಿಟಿಯಾಗಿ ಭಡ್ತಿ ಹೊಂದಿದ್ದರು. ನಿವತ್ತಿಗೆ ಮೂರು ತಿಂಗಳಷ್ಟೇ ಬಾಕಿ ಇತ್ತು. ಮೃತರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರಿದ್ದಾರೆ.
ಅಂತಿಮ ನಮನ: ಸಹಾಯಕ ಕಮಿಷನರ್ ಯೋಗೇಶ್ವರ, ತಹಸೀಲ್ದಾರ್ ಗಾಯತ್ರಿ ಎನ್.ನಾಯಕ್, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿನಕರ ಶೆಟ್ಟಿ, ಆಹಾರ ಇಲಾಖೆಯ ಹಿರಿಯಕಾರಿಗ ಅಧಿಳು ಅಂತಿಮ ನಮನ ಸಲ್ಲಿಸಿದರು.
ಪರಿಹಾರಕ್ಕೆ ಆಗ್ರಹ: ಚುನಾವಣೆ ಕರ್ತವ್ಯದಲ್ಲಿರುವಾಗಲೇ ನಿಧನರಾದ ಜನಾರ್ದನ ಅವರಿಗೆ ಚುನಾವಣೆ ಆಯೋಗ ಪರಿಹಾರ ಘೋಷಿಸಬೇಕೆಂದು ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ ತಾಲೂಕು ಶಾಖೆ ಆಗ್ರಹಿಸಿದೆ. ಸಂಘದ ಪದಾಧಿಕಾರಿಯಾಗಿರುವ ಅವರು ಜನಪ್ರಿಯ ಅಧಿಕಾರಿಯಾಗಿದ್ದು, ಆಯೋಗ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.