ಮಂಗಳೂರು : ಆತ ದೂರದ ಮುಂಬಯಿನ ಯುವಕ.ಆಕೆ ಮಂಗಳೂರಿನ ಯುವತಿ. ಫೇಸ್ ಬುಕ್ ಮೂಲಕ ಪರಸ್ಪರ ಪರಿಚಯವಾಗಿತ್ತು. ಈ ಪರಿಚಯದ ದುರ್ಬಳಕೆ ಮಾಡಿ ಕೊಂಡ ಆತ ಆಕೆಯ ಬಳಿ ಪ್ರೇಮ ಭಿಕ್ಷೆ ಬೇಡಿದ್ದ.
ಆಕೆ ವೈದ್ಯಕೀಯ ವಿದ್ಯಾರ್ಥಿನಿ. ಆತ ಇನ್ನೂ ಮೆಟ್ರಿಕ್ ಪಾಸಾಗಿಲ್ಲ ಎಂಬ ಮಾಹಿತಿ ಸಿಕ್ಕಿದ ಕೂಡಲೇ ಆಕೆ ಆತ ಮಂಡಿಸಿದ್ದ ಪ್ರೇಮ ಭಿಕ್ಷೆಯನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾಳೆ. ಆಗ ಆತ ಹತಾಶೆಗೆ ಒಳಗಾಗಿದ್ದಾನೆ ಇದು ಆತನಿಗೆ ಆಕೆಯ ಮೇಲೆ ಸೇಡು ತೀರಿಸಲು ಕಾರಣವಾಯಿತು.
ಆರೋಪಿ ನಿಖೀಲೇಶ್ ಕಾಮತ್ (33) ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ಆಕೆ (22 ವರ್ಷ ಪ್ರಾಯದ ಯುವತಿ) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಆತ ಮುಂಬಯಿನಿಂದ ಮಂಗಳೂರಿಗೆ ಬಂದಿದ್ದಾಗ ಬಂದರು ಪೊಲೀಸರು ಆತನಿಗೆ ಇನ್ನು ಮುಂದೆ ಆಕೆಯ ತಂಟೆಗೆ ಬರ ಬೇಡ ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.
ಆದರೆ ಬುಧವಾರ ಮತ್ತೆ ಮುಂಬಯಿನಿಂದ ಬಂದು ನೇರವಾಗಿ ಅಳಕೆಯಲ್ಲಿರುವ ಯುವತಿಯ ಮನೆಗೆ ಹೋಗಿದ್ದಾನೆ. ನಿನ್ನನ್ನೂ ಬದುಕಲು ಬಿಡಲಾರೆ ಮತ್ತು ನಾನೂ ಬದುಕುವುದಿಲ್ಲ ಎಂದು ಹೇಳಿ ಆತ ಆಕೆಯನ್ನು ಚೂರಿಯಿಂದ ಇರಿದು ಬಳಿಕ ತಾನೂ ಇರಿದುಕೊಂಡಿದ್ದಾನೆ. ಆಕೆಯ ಎರಡೂ ಕೈಗಳಿಗೆ ಮತ್ತು ಎದೆಗೆ ಗಾಯಗಳಾಗಿವೆ. ಆತನ ಎದೆಗೆ ಗಾಯವಾಗಿದೆ.
ಕದ್ರಿ ಪೊಲೀಸ್ ಠಾಣೆಯಲ್ಲಿ ಆರೋಪಿ ನಿಖೀಲೇವ್ ಕಾಮತ್ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.