ಸಿಸಿಟಿವಿಯಲ್ಲಿ ದೇವಿಶ್ರೀ ಸ್ವಾಮಿಯ ಕಾಮದಾಟ. ಎಲ್ಲೆಡೆ ಆಕ್ರೋಶ.

ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿ ದೇವಿಶ್ರೀ ಹೆಸರಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುವ ರಾಮಸ್ವಾಮಿ ದೇವಿಶ್ರೀ ಗುರೂಜಿ ಅವರು ತಮ್ಮ ಸುರಕ್ಷತೆಗಾಗಿ ಅಳವಡಿಸಿಕೊಂಡಿದ್ದ ಸಿಸಿಟೀವಿ ಕ್ಯಾಮೆರಾ ದೆಸೆಯಿಂದಾಗಿ ಇದೀಗ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ.

ದೇವಿಶ್ರೀ ಗುರೂಜಿ ಪ್ರತಿಷ್ಠಿತ ಎಚ್‌ಎಸ್‌ಆರ್‌ ಲೇಔಟ್‌ನ ತಮ್ಮ ನಿವಾಸದಲ್ಲಿ ಮೂವರು ಯುವತಿಯರೊಂದಿಗೆ ಪ್ರತ್ಯೇಕವಾಗಿ ಸರಸ- ಸಲ್ಲಾಪ ನಡೆಸುವ ದೃಶ್ಯಗಳು ಅವರೇ ಅಳವಡಿಸಿದ್ದ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಇದೀಗ ಅವು ಬಯಲಾಗಿವೆ. ಈ ರಾಸಲೀಲೆ ದೃಶ್ಯಗಳ ತುಣುಕುಗಳು ಶನಿವಾರ ಇಡೀ ದಿನ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡಿವೆ.

ಎಚ್‌ಎಸ್‌ಆರ್‌ ಲೇಔಟ್‌ನ 25 ಮತ್ತು 26ನೇ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ದೇವಿ ಫೌಂಡೇಷನ್‌ ಹೆಸರಲ್ಲಿ ದೇವಿಶ್ರೀ ಗುರೂಜಿ ಜ್ಯೋತಿಷ್ಯಾಲಯ ನಡೆಸುತ್ತಿದ್ದು, ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂಬುದನ್ನು ಈ ಸಿಸಿಟೀವಿ ದೃಶ್ಯಾವಳಿಗಳು ಬಹಿರಂಗಗೊಳಿಸಿವೆ.

ಅಲ್ಲದೆ, ಗುರೂಜಿಯ ಮಾತಿಗೆ ಮರುಳಾಗಿ ಅವರೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಭಕ್ತೆಯೊಬ್ಬಳು ಗರ್ಭವತಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಿಸಲಾಗಿದೆ. ನಂತರ ಇದನ್ನು ಬಹಿರಂಗಗೊಳಿಸದಂತೆ ದೇವಿಶ್ರೀ ಗುರೂಜಿ ಕೊಲೆ ಬೆದರಿಕೆ ಹಾಕಿದ್ದರು ಎಂಬ ದೂರು ಕೇಳಿಬಂದಿದೆ.

ಜ್ಯೋತಿಷ್ಯದ ನೆಪದಲ್ಲಿ ದೇವಿಶ್ರೀ ಗುರೂಜಿ ಹಲವಾರು ಯುವತಿ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಜ್ಯೋತಿಷ್ಯ ಕೇಳಲು ಒಬ್ಬರೇ ಬರಬೇಕು ಎಂದು ಮಹಿಳೆಯರಿಗೆ ಸೂಚನೆ ನೀಡುತ್ತಿದ್ದರು ಎಂಬ ಆರೋಪಗಳು ರಾಸಲೀಲೆ ಪ್ರಕರಣ ಬಯಲಾಗುತ್ತಿದ್ದಂತೆ ಕೇಳಿಬರಲಾರಂಭಿಸಿವೆ.

ಇನ್ನೊಂದೆಡೆ ತನ್ನ ರಾಸಲೀಲೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ದೇವಿಶ್ರೀ ಗುರೂಜಿ ತಲೆಮರೆಸಿಕೊಂಡಿದ್ದು, ತಮಿಳುನಾಡಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ರಾಸಲೀಲೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದರೂ ಇದುವರೆಗೆ ದೇವಿಶ್ರೀ ವಿರುದ್ಧ ಯಾರೂ ಪೊಲೀಸ್‌ ದೂರು ನೀಡಿಲ್ಲ. ಆದರೂ, ಜ್ಯೋತಿಷಿ ಮನೆ ಮುಂದೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ತಾವೇ ತೋಡಿದ ಹಳ್ಳದಲ್ಲಿ ಬಿದ್ದರು:

ರಾಮಸ್ವಾಮಿ ದೇವಿಶ್ರೀ ಮುಂಜಾಗ್ರತಾ ಕ್ರಮವಾಗಿ ತಮ್ಮ ನಿವಾಸದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡಿದ್ದರು. ಅದೇ ಅವರ 'ರಹಸ್ಯ' ಚಟುವಟಿಕೆಗಳನ್ನು ಬಹಿರಂಗಗೊಳಿಸಿದೆ. ಮೂವರು ಯುವತಿಯರೊಂದಿಗೆ ಅವರು ನಡೆಸಿದ ಸರಸ- ಸಲ್ಲಾಪಗಳ ದೃಶ್ಯಾವಳಿಗಳು ನಿವಾಸದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲೇ ಸೆರೆಯಾಗಿವೆ. ರಾಸಲೀಲೆ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಗುರೂಜಿ ಸಂಸ್ಥೆಯ ಸಿಬ್ಬಂದಿ ಅಪಾರ್ಟ್‌ಮೆಂಟ್‌ ಮುಂಭಾಗದ ಬ್ಯಾನರ್‌, ಬೋರ್ಡ್‌ಗಳನ್ನು ತೆರವುಗೊಳಿಸಿದ್ದಾರೆ.

ಆಕ್ರೋಶ: ಕಾಮಿ ಗುರೂಜಿಯ ಸರಸ- ಸಲ್ಲಾಪ ಬಯಲಾಗುತ್ತಿದ್ದಂತೆ ರೊಚ್ಚಿಗೆದ್ದ ಭಕ್ತರ ದಂಡು ಮತ್ತು ಹಲವು ಕನ್ನಡಪರ ಸಂಘಟನೆಗಳು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿನ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರೂಜಿ ನಿವಾಸಕ್ಕೆ ಮುತ್ತಿಗೆ ಹಾಕಿ ಮನೆಯ ಮುಂದಿರುವ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಇದೇ ವೇಳೆ ಗುರೂಜಿಗೆ ಸಂಬಂಧಿಸಿದ ಕಾರೊಂದನ್ನು ಜಖಂ ಮಾಡಲಾಗಿದೆ.

10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು

ಮೂಲತಃ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ರಾಮಸ್ವಾಮಿ ದೇವಿಶ್ರೀ ಗುರೂಜಿ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಎಚ್‌ಎಸ್‌ಆರ್‌ ಬಡಾವಣೆಗೆ ಬರುವ ಮುನ್ನ ಹೆಬ್ಬಗೋಡಿಯಲ್ಲಿ ತಂಗಿದ್ದ ಅವರು ಅಲ್ಲಿನ ದೇವಾಲಯವೊಂದರಲ್ಲಿ ಅರ್ಚಕರಾಗಿದ್ದರು. ಜ್ಯೋತಿಷ್ಯವನ್ನೂ ಹೇಳುತ್ತಿದ್ದ ಅವರ ಹೆಸರು ಮಾಧ್ಯಮಗಳಿಂದಾಗಿ ಹೆಚ್ಚು ಪ್ರಚಾರ ಪಡೆದಿತ್ತು. ಖ್ಯಾತಿ ಹೆಚ್ಚಾದ ಹಿನ್ನೆಲೆಯಲ್ಲಿ ಅರ್ಚಕ ವೃತ್ತಿ ಬಿಟ್ಟ ಗುರೂಜಿ, ಎಚ್‌ಎಸ್‌ಆರ್‌ ಲೇಔಟ್‌ಗೆ ಸ್ಥಳಾಂತರಗೊಂಡು ಜ್ಯೋತಿಷ್ಯ ಹೇಳಲಾರಂಭಿಸಿದ್ದರು.

ರಾಮಸ್ವಾಮಿ ಮೂಲ ಹೆಸರು ರಾಮು ಆಗಿದ್ದು, ಶಾಲೆ ದಾಖಲೆಗಳಲ್ಲಿ ದೇವಿಪ್ರಸಾದ್‌ ಎಂದು ನಮೂದಿಸಲಾಗಿದೆ. ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಮುಳಬಾಗಿಲಿನಲ್ಲಿನ ಶಾಂತಮಲೈ ಅಯ್ಯಪ್ಪ ದೇವಾಲಯದಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ಬಂಗಾರಪೇಟೆಯಲ್ಲಿನ ಕೋಟಿಲಿಂಗೇಶ್ವರದಲ್ಲಿ ಆರ್ಚಕರಾಗಿ ಸೇರಿಕೊಂಡಿದ್ದರು. ಅಲ್ಲಿ ಹೆಸರು ಕೆಡಿಸಿಕೊಂಡು ಬೆಂಗಳೂರಿಗೆ ಬಂದು ಹೆಬ್ಬಗೋಡಿಯಲ್ಲಿ ಆರ್ಚಕರಾಗಿ ಕೆಲಸ ಮಾಡುತ್ತಿದ್ದರು. ರಾಮಸ್ವಾಮಿ ದೇವಿಶ್ರೀ ತಂದೆ ಸೆಕ್ಯೂರಿಟಿಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.

ಗುರೂಜಿ ಕಾರ್ಯಕ್ರಮ ರದ್ದು

ರಾಮಸ್ವಾಮಿ ದೇವಿಶ್ರೀ ಗುರೂಜಿಯ ಕಾಮದಾಟ ಬಯಲಾಗುತ್ತಿದ್ದಂತೆ ಭಾನುವಾರ ಮಲ್ಲೇಶ್ವರ ಮೈದಾನದಲ್ಲಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಯಜ್ಞ ಕಾರ್ಯಕ್ರಮ ರದ್ದಾಗಿದೆ.

ಗುರೂಜಿ ತಲೆಮರೆಸಿಕೊಂಡಿರುವುದಲ್ಲದೇ, ಮಾಧ್ಯಮದಲ್ಲಿ ಬಿತ್ತರಗೊಂಡ ರಾಸಲೀಲೆ ಗಮನಿಸಿದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕಾರ್ಯಕ್ರಮ ರದ್ದಾಗಿದೆ ಎನ್ನಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com