ಬ್ರಹ್ಮಾವರ: ಕುಖ್ಯಾತ ಕಳ್ಳರ ಸೆರೆ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಬ್ರಹ್ಮಾವರ : ಆಶ್ರಮಕ್ಕೆ ಬಟ್ಟೆ ಕೇಳುವ ನೆಪದಲ್ಲಿ ಮನೆಯನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಸೋಮವಾರ ಬಂಧಿಸಲಾಗಿದೆ.

ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕು ಆಗ್ರೆ ಅಂಗಡಿಹಳ್ಳಿ ಪ್ರಸ್ತುತ ಕೇರಳ ರಾಜ್ಯ ಕೊಯಿಕೋಡು ಜಿಲ್ಲೆಯ ಮಹೇಶ(19) ಹಾಗೂ ಬೆಂಗಳೂರು ನಾಗರಬಾವಿಯ ಮಣಿಕಂಠ(19) ಬಂಧಿತರು.

ಬಾಕೂìರಿನಲ್ಲಿ ಇದೇ ಮಾ.13ರಂದು ನಡೆದ ಕಳ್ಳತನ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾಗ ಈ ಆಸಾಮಿಗಳ ಚಲನ ವಲನಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸಿ, ಆಧುನಿಕ ತಾಂತ್ರಿಕ ವಿಧಾನಗಳನ್ನು ಅನುಸರಿಸಿ ಮಾ.31ರಂದು ಸೆರೆಹಿಡಿಯಲು ಯಶಸ್ವೀಯಾಗಿದ್ದಾರೆ. ಇದರಲ್ಲಿ ಮಹೇಶ ಮಣಿಪಾಲದ ಪ್ರಕರಣವೊಂದರಲ್ಲಿ ಬಂಧಿತನಾಗಿ ಹೊರಬಂದಿದ್ದ.

ಕುಖ್ಯಾತ ಕಳ್ಳರು:

ಆರೋಪಿಗಳನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಪ್ರಸ್ತುತ ಸಾಲಿನ ಜನವರಿಯಿಂದ ಈ ತನಕ ಉಡುಪಿ ಮತ್ತು ಕುಂದಾಪುರ ತಾಲೂಕು ಹಾಗೂ ದ.ಕ. ಜಿಲ್ಲೆಯ ಮಂಗಳೂರು ಪೂರ್ವ, ಮುಲ್ಕಿಯ ಕಾರ್ನಾಡು, ಕಿನ್ನಿಗೋಳಿಯ ಐಕಳ, ಬೆಳ್ತಂಗಡಿ ಕಡೆಗಳಲ್ಲಿ ಇಬ್ಬರೂ ಸೇರಿ ಕಳ್ಳತನ ಮಾಡಿದ ವಿಚಾರವನ್ನು ಬಹಿರಂಗೊಳಿಸಿದ್ದಾರೆ.

ವಿಶಿಷ್ಟ ವಿಧಾನ:

ಇವರು ಕಳ್ಳತನ ಮಾಡುವ ವಿಧಾನ ಮತ್ತು ಮಾಡಿಕೊಳ್ಳುತ್ತಿದ್ದ ಪೂರ್ವ ಸಿದ್ದತೆ ವಿಶಿಷ್ಟವಾಗಿದೆ. ಶ್ರೀ ಶ್ರೇಯಸ್‌ ವೃದ್ಧಾಶ್ರಮ ಅನಾಥರ ಆಶ್ರಯ ಧಾಮ, ಮಾಗಡಿ ಬೆಂಗಳೂರು ಎಂಬ ಹೆಸರಿನಲ್ಲಿ ಕಾಗದ ಪ್ರಿಂಟ್‌ ಮಾಡಿಕೊಂಡು ಅದನ್ನು ಮನೆ ಮನೆಗೆ ತೋರಿಸಿ ಆಶ್ರಮಕ್ಕೆ ಹಳೆ ಬಟ್ಟೆ ಕೇಳುತ್ತಿದ್ದರು. ಈ ನೆಪದಲ್ಲಿ ಬೀಗ ಹಾಕಿದ ಮನೆಯನ್ನು ನೋಡಿಕೊಂಡು ಕಳ್ಳತನ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಉಡುಪಿಯ ಬಲೈಪಾದೆ ಮತ್ತು ಸುರತ್ಕಲ್‌ನಲ್ಲಿ ಟೆಂಟ್‌ ಹಾಗೂ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು ಕೊಂಡು ಕೃತ್ಯ ನಡೆಸುತ್ತಿದ್ದರು.

ಬಂಧಿತರಿಂದ ಸುಮಾರು 13.23 ಲಕ್ಷ ರೂ. ಮೌಲ್ಯದ 490 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಂತೋಷ್‌ ಕುಮಾರ್‌ ಮತ್ತು ಉಡುಪಿ ಉಪವಿಭಾಗ ಪೊಲೀಸ್‌ ಉಪಾಧೀಕ್ಷಕ ಡಾ| ಪ್ರಭುದೇವ ಬಿ. ಮಾನೆ ಅವರ ಮೇಲ್ವಿಚಾರಣೆಯಲ್ಲಿ ಬ್ರಹ್ಮಾವರ ಪೊಲೀಸ್‌ ವೃತ್ತ ನಿರೀಕ್ಷಕ ಅರುಣ್‌ ಬಿ. ನಾಯಕ್‌, ಬ್ರಹ್ಮಾವರ ಪೊಲೀಸ್‌ ಉಪನಿರೀಕ್ಷಕ ಗಿರೀಶ್‌ ಎಸ್‌, ಎ.ಎಸ್‌.ಐ. ಬಾಲಕೃಷ್ಣ ಕಾರ್ಯಾಚರಣೆ ನಡೆಸಿದ್ದರು. ಇಲಾಖೆಯ ಸುದೇಶ್‌ ಶೆಟ್ಟಿ, ಪ್ರಸನ್ನ, ಜೀವನ್‌, ರಮೇಶ್‌, ಪ್ರಸಾದ್‌ ಶೆಟ್ಟಿ, ಶೈಲೇಶ್‌ ಕುಮಾರ್‌, ಅರುಣ್‌, ಅಚ್ಚುತ, ಚಂದ್ರಶೇಖರ್‌ ಸಹಕರಿಸಿದ್ದರು.

ಜನ ಜಾಗೃತರಾಗಬೇಕು

ಸಹಾಯಧನ, ಬಟ್ಟೆ ಬರೆ ಕೇಳಿಕೊಂಡು ಮನೆಗೆ ಬರುವಾಗ ಸಾರ್ವಜನಿಕರು ಜಾಗೃತರಾಗಿಬೇಕು. ಎಲ್ಲಿಂದ ಬಂದವರು, ಆಶ್ರಮಕ್ಕೂ ನಿಮಗೂ ಏನು ಸಂಬಂಧ ಏನೂ ಕೇಳದೆ ಅವರೊಂದಿಗೆ ಸಲಿಗೆಯಿಂದ ಮಾತನಾಡುವುದರಿಂದ ಅಪರಾಧಕ್ಕೆ ಇನ್ನಷ್ಟು ಅವಕಾಶ ಕೊಟ್ಟಂತಾಗುತ್ತದೆ. ಪಕ್ಕದ ಮನೆ ಬೀಗ ಹಾಕಿದ್ದಾಗ ಇವರು ಕೇಳುವ ಪ್ರಶ್ನೆಗೆ ನೇರವಾಗಿ ಇಲ್ಲಿಗೆ ಹೋಗಿದ್ದಾರೆ, ಇಷ್ಟು ದಿನ ಇರುವುದಿಲ್ಲ ಎನ್ನುವುದನ್ನೂ ತಿಳಿಸಿದರೆ ಕಳ್ಳತನಕ್ಕೆ ಮತ್ತಷ್ಟು ಸಹಕಾರ ನೀಡಿದಂತಾಗುತ್ತದೆ.

ಬಾಡಿಗೆ ನೀಡುವಾಗ ವಿಚಾರಿಸಿ:

ಮನೆ ಮಾಲಿಕರು ಬಾಡಿಗೆ ನೀಡುವಾಗ ಪೂರ್ವಾಪರ ವಿಚಾರಿಸಬೇಕು. ಬಾಡಿಗೆ ಇದ್ದವರ ಚಲನ ವಲನ, ಕಾರ್ಯಚಟುವಟಿಕೆಗಳನ್ನು ಸ್ವಲ್ಪ ಮಟ್ಟಿಗೆ ಗಮನಿಸುವುದರಿಂದ ವಿಚಾರ ತಿಳಿಯುತ್ತದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com